ಚಂಡೀಗಢ: ಪಂಜಾಬ್ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಲೋಪ ಉಂಟಾದ ಕುರಿತಂತೆ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ಮೋದಿಯವರು ಇಂದು ಫಿರೋಜ್‌ಪುರ ಜಿಲ್ಲೆಗೆ ಭೇಟಿ ನೀಡಿ ಹಿಂತಿರುಗಬೇಕಾಯಿತು. ಇದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾವು ನಮ್ಮ ಪ್ರಧಾನಿಯನ್ನು ಗೌರವಿಸುತ್ತೇವೆ. ನಾನು ಇಂದು ಬಟಿಂಡಾದಲ್ಲಿ ಪ್ರಧಾನ ಮಂತ್ರಿ ಮೋದಿ ಅವರನ್ನು ಬರಮಾಡಿಕೊಳ್ಳಬೇಕಾಗಿತ್ತು. ಆದರೆ, ನನ್ನ ಜೊತೆಗಿದ್ದವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಮತ್ತು ಪಾಸಿಟಿವ್ ಬಂದ ಕೆಲವರ ಜತೆ ನಿಕಟ ಸಂಪರ್ಕದಲ್ಲಿದ್ದ ಕಾರಣ ಇಂದು ಪ್ರಧಾನಿಯವರನ್ನು ಬರಮಾಡಿಕೊಳ್ಳಲು ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿ ಮತ್ತು ಪ್ರತಿಭಟನೆಗಳಿಂದಾಗಿ ಭೇಟಿಯನ್ನು ನಿಲ್ಲಿಸುವಂತೆ ನಾವು PMO ಕಚೇರಿಗೆ ಕೇಳಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹಠಾತ್ ಮಾರ್ಗ ಬದಲಾವಣೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಪ್ರಧಾನಿ ಭೇಟಿ ವೇಳೆ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಪ್ರಧಾನಿ ಮೋದಿ ಭೇಟಿ ವೇಳೆ ಯಾವುದೇ ಭದ್ರತಾ ಲೋಪಗಳಾಗಿದ್ದರೆ, ನಾವು ತನಿಖೆ ನಡೆಸುತ್ತೇವೆ. ಪ್ರಧಾನಿಗೆ ಯಾವುದೇ ಅಪಾಯವಾಗಿಲ್ಲ. ಕಳೆದ ಒಂದು ವರ್ಷದಿಂದ ರೈತರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾರೆ. ನಾವು ರೈತರ ಮೇಲೆ ಲಾಠಿ ಚಾರ್ಜ್ ಮಾಡಲು ಹೋಗುವುದಿಲ್ಲ. ನಾವು ನಿನ್ನೆ ರಾತ್ರಿ ಇಡೀ ರೈತರೊಂದಿಗೆ ಮಾತನಾಡಿದ ನಂತರ ಅವರು ತಮ್ಮ ಧರಣಿಯನ್ನು ಕೊನೆಗೊಳಿಸಿದ್ದಾರೆ. ಇಂದು ಇದ್ದಕ್ಕಿದ್ದಂತೆ ಫಿರೋಜ್‌ಪುರ ಜಿಲ್ಲೆಯಲ್ಲಿ ಕೆಲವು ಚಳವಳಿಗಾರರು ಜಮಾಯಿಸಿದ್ದರು ಎಂದು ಹೇಳಿದ್ದಾರೆ.