ಬಿಳಿಸ್ರಾವ ಇಂದು ಹೆಚ್ಚಿನ ಮಹಿಳೆಯರಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಸಂತಾನೋತ್ಪತ್ತಿ ಹಾರ್ಮೋನುಗಳಿಗೆ ಸಂಬಂಧಿಸಿದಂತೆ ಜನನಾಂಗದಿಂದ ವಿಸರ್ಜನೆಯಾಗುವುದು ಅತಿ ಸಹಜವಾದ ನೈಸರ್ಗಿಕ ಕ್ರಿಯೆ. ಇದು ಯೋನಿಯನ್ನು ನಯವಾಗಿರುವಂತೆ ಮಾಡಲು ಅನಿವಾರ್ಯ ಕೂಡಾ ಹೌದು.
ಹಾರ್ಮೋನ್ ಗಳಲ್ಲಾಗುವ ಬದಲಾವಣೆಯಿಂದ ಅಥವಾ ಜನನ ನಿಯಂತ್ರಣ ಮಾತ್ರೆಗಳ ಸೇವನೆಯಿಂದ ಬಿಳಿ ಸ್ರಾವ ವಿಸರ್ಜನೆ ಅಗುವುದು ಸಹಜ. ಇದಕ್ಕೆ ಭಯಪಡಬೇಕಿಲ್ಲ. ಇದು ವಿಪರೀತ ಹೆಚ್ಚಿದರೆ ಮಾತ್ರ ವೈದ್ಯರ ಸಲಹೆ ಪಡೆಯಬೇಕು.
ಈ ವಿಸರ್ಜನೆ ಹಳದಿ ಅಥವಾ ಹಸಿರು ಬಣ್ಣದಿಂದ ಕೂಡಿದ್ದು ದುರ್ವಾಸನೆ ಭರಿತವಾಗಿದ್ದರೆ ಮತ್ತು ಆ ಭಾಗದಲ್ಲಿ ವಿಪರೀತ ತುರಿಕೆಯಿದ್ದರೆ ಇದನ್ನು ಅಸಹಜ ಎನ್ನಲಾಗುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಬೇಕೇ ಬೇಕು. ಇದು ದೀರ್ಘಕಾಲ ಮುಂದುವರಿಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
ಗರ್ಭಕೋಶದ ಕ್ಯಾನ್ಸರ್ ನಿಂದಾಗಿ ಬಿಳಿಸ್ರಾವ ಆಗುತ್ತಿದೆ ಎಂಬುದು ದೃಢಪಟ್ಟರೆ ಮಾತ್ರ ಗರ್ಭಕೋಶ ತೆಗೆದುಹಾಕುತ್ತಾರೆ. ಇಲ್ಲವಾದರೆ ತೆಗೆಸಬೇಕಿಲ್ಲ. ಕೆಲವೆಡೆ ಮಹಿಳೆಯರು ಬಿಳಿ ಸೆರಗು ಇದೆ ಎಂಬ ಕಾರಣಕ್ಕೆ ಗರ್ಭಕೋಶ ತೆಗೆಸಲು ಮುಂದಾಗುತ್ತಾರೆ. ಇದು ಖಂಡಿತಾ ಸರಿಯಲ್ಲ. ಬಿಳಿ ಸೆರಗು ಕ್ಯಾನ್ಸರ್ ನ ಲಕ್ಷಣವೂ ಅಲ್ಲ. ಹಾಗಾಗಿ ಅನಗತ್ಯ ಭಯ ಬಿಟ್ಟು ವೈದ್ಯರ ಸಲಹೆ ಪಡೆಯಿರಿ.