ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಕೆಲವೊಮ್ಮೆ ಯಾವುದೇ ವ್ಯಾಯಾಮ, ಡಯಟ್ ಇಲ್ಲದೆ ತೂಕ ಇಳಿಯಲು ಶುರುವಾಗುತ್ತೆ. ಏಕಾಏಕಿ ತೂಕ ಇಳಿಯುತ್ತಿದ್ದರೆ ಖುಷಿಯಾಗ್ಬೇಡಿ. ಇದು ದೈಹಿಕ ರೋಗಕ್ಕೆ ಕಾರಣವಾಗಿರಬಹುದು. ಹಾಗಾಗಿ ಯಾವುದೇ ಪ್ರಯತ್ನವಿಲ್ಲದೆ ತೂಕ ಇಳಿಯುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ನಮ್ಮ ದೇಹದ ತೂಕವು ಅನೇಕ ಸಾಮಾನ್ಯ ಕಾರಣಗಳಿಂದಾಗಿ ವರ್ಷದುದ್ದಕ್ಕೂ ಏರಿಳಿತವಾಗ್ತಿರುತ್ತದೆ. ಆದರೆ 6 ರಿಂದ 12 ತಿಂಗಳೊಳಗೆ ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ದೇಹದ ತೂಕದ ಶೇಕಡಾ 5 ರಷ್ಟು ಇಳಿದಿದ್ದರೆ ಚಿಂತಿಸುವ ಅಗತ್ಯವಿದೆ. ಇದರ ಹಿಂದಿನ ಕಾರಣ ಅಪೌಷ್ಟಿಕತೆ. ಆಯಾಸ, ಹಸಿವು ಕಡಿಮೆಯಾಗುವುದು, ಬೇಗನೆ ಅನಾರೋಗ್ಯಕ್ಕೆ ಒಳಗಾಗುವುದು ಮುಂತಾದ ಚಿಹ್ನೆಗಳನ್ನು ಸಹ ಕಾಣಬಹುದು.
ಏಕಾಏಕಿ ತೂಕ ಕಡಿಮೆಯಾದ್ರೆ ಈ ರೋಗಗಳು ಕಾಡುವ ಸಾಧ್ಯತೆಯಿದೆ. ಖಿನ್ನತೆ, ಹೃದಯ, ಮೂತ್ರಪಿಂಡ, ಶ್ವಾಸಕೋಶ ಮತ್ತು ಯಕೃತ್ತಿನ ಕಾಯಿಲೆಗೆ ಕಾರಣವಾಗಬಹುದು. ಸಂಧಿವಾತದಂತಹ ದೀರ್ಘಕಾಲದ ಅನಾರೋಗ್ಯವೂ ಇದಕ್ಕೆ ಕಾರಣವಾಗಬಹುದು. ಮಧುಮೇಹ, ಆಲ್ಕೊಹಾಲ್ ಮತ್ತು ಮಾದಕ ವ್ಯಸನ, ಹಲ್ಲಿನ ಸಮಸ್ಯೆ, ಬಾಯಿ ಹುಣ್ಣುಗಳಂತಹ ಕಾಯಿಲೆ ಕೂಡ ಇದಕ್ಕೆ ಕಾರಣವಾಗಿರುತ್ತದೆ.
ಬ್ಯಾಕ್ಟೀರಿಯಾ, ಟಿಬಿ, ಏಡ್ಸ್ ನಂತಹ ವೈರಲ್ ಸೋಂಕುಗಳು, ಕ್ಯಾನ್ಸರ್, ಹೊಟ್ಟೆ ಹುಣ್ಣು ಮುಂತಾದ ಹೊಟ್ಟೆಯ ಕಾಯಿಲೆ ಕೂಡ ನಿಮಗೆ ಕಾಡಬಹುದು. ಹಾಗಾಗಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ಯಾವುದು ಎಂಬುದನ್ನು ಪತ್ತೆ ಮಾಡಿ, ಚಿಕಿತ್ಸೆ ಪಡೆಯಿರಿ.