ಇತ್ತೀಚಿನ ದಿನಗಳಲ್ಲಿ ಪ್ರೋಟೀನ್ ಕೊರತೆಯಿಂದ ವಿವಿಧ ರೀತಿಯ ಸಮಸ್ಯೆಗಳು ಕಾಡುತ್ತಿವೆ. ದೈಹಿಕವಾಗಿ ಸಂಪೂರ್ಣ ಬೆಳವಣಿಗೆಗೆ ಪ್ರೋಟೀನ್ ಬಹಳ ಅವಶ್ಯಕ. ಈ ಪ್ರೋಟೀನ್ ಕೊರತೆಯಿಂದ ಕಾಡುವ ತೊಂದರೆಗಳಿಂದ ಪಾರಾಗಲು ಪ್ರೋಟೀನ್ ಹೆಚ್ಚಾಗಿರುವ ಆಹಾರ ಸೇವನೆ ಅತ್ಯವಶ್ಯಕ.
ಮಾಂಸಹಾರಿಗಳಿಗೆ ಈ ತಲೆ ನೋವಿಲ್ಲ. ಮಾಂಸ, ಮೀನು, ಮೊಟ್ಟೆಯಿಂದ ಪ್ರೋಟೀನ್ ದೊರೆಯುತ್ತದೆ. ಆದರೆ ಸಸ್ಯಹಾರಿಗಳಿಗೆ ಪ್ರೋಟೀನ್ ಲಭ್ಯತೆ ಕಡಿಮೆ. ಹೀಗಾಗಿ ಒಳ್ಳೆಯ ಗುಣಮಟ್ಟದ ಪ್ರೋಟೀನ್ ಒದಗಿಸುವ ಪದಾರ್ಥವೆಂದರೆ ಮೊಳಕೆ ಕಾಳುಗಳು.
ಮೊಳಕೆ ಕಾಳುಗಳನ್ನು ಬೇಯಿಸಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶ ಲಭ್ಯವಾಗುತ್ತದೆ. ದೇಹದಲ್ಲಿ ನರಗಳ ಕ್ರಿಯೆಗಳನ್ನು ಚುರುಕುಗೊಳಿಸುತ್ತದೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ವ್ಯವಸ್ಥೆಯ ವೃದ್ಧಿಗೆ, ಕಣ್ಣಿನ ಆರೋಗ್ಯಕ್ಕೆ, ಅಧಿಕ ರಕ್ತದೊತ್ತಡವನ್ನು ಹತೋಟಿಗೆ ತರಲು ಈ ಮೊಳಕೆ ಕಾಳುಗಳು ಅನುಕೂಲಕಾರಿ.
ಕೇವಲ ಮೊಳಕೆ ಬರಿಸದ ಕಾಳುಗಳ ಬದಲಾಗಿ ಮೊಳಕೆ ಬರಿಸಿದ ಕಾಳುಗಳನ್ನು ಬೇಯಿಸಿ ಸೇವಿಸುವುದರಿಂದ ಮೊಳಕೆ ಕಾಳುಗಳಲ್ಲಿನ ಎಲ್ಲಾ ಪೋಷಕಾಂಶಗಳನ್ನು ದೇಹವು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಅದರಲ್ಲೂ ಪ್ರತಿನಿತ್ಯ ಮಕ್ಕಳಿಗೆ ಬೇಯಿಸಿದ ಮೊಳಕೆ ಕಾಳುಗಳನ್ನು ನೀಡಿದರೆ ಇನ್ನೂ ಒಳ್ಳೆಯದು.