ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕ ಸರ್ಕಾರ ಪತನಗೊಳ್ಳಲಿದೆ ಎಂಬ ಹೇಳಿಕೆ ನೀಡಿದ್ದು, ಆ ನಂತರ ಈ ಕುರಿತು ದೊಡ್ಡ ಚರ್ಚೆಯೇ ನಡೆಯುತ್ತಿದೆ.
ರಾಜ್ಯ ಬಿಜೆಪಿ ನಾಯಕರು ಸಹ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದ್ದು, ಇದರ ಮಧ್ಯೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ಮತ್ತವರ ಪುತ್ರರ ವಿರುದ್ಧ ಗುಡುಗಿದ್ದಾರೆ.
ಹಡಬೆ ಹಣ ತಂದು ಯಡಿಯೂರಪ್ಪ ಮತ್ತವರ ಮಕ್ಕಳು, ಶಿಕಾರಿಪುರ ಮಾತ್ರ ಅಭಿವೃದ್ಧಿ ಮಾಡಿದ್ದು ಇತರೆ ತಾಲೂಕುಗಳ ಅಭಿವೃದ್ಧಿ ಮಾಡಿಲ್ಲ. ಈಗ ಅಂತಹ ಹಣದಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅದೇಗೆ ಬೀಳಿಸುತ್ತಾರೋ ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು.
ಕಳೆದ ಬಾರಿ 17 ಜನ ಮುಠ್ಠಾಳರು ಪಕ್ಷ ಬಿಟ್ಟು ಬಿಜೆಪಿಗೆ ಹೋಗಿದ್ದರು. ಆದರೆ ಈ ಬಾರಿ ಅಂತವರಿಲ್ಲ ಎಂದು ಹೇಳಿದ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಇಷ್ಟು ಸ್ಥಾನವನ್ನು ಬಿಜೆಪಿ ಗಳಿಸಿದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನೀವು ನಿಮ್ಮ ಮಗ ರಾಜಕೀಯ ನಿವೃತ್ತಿ ಘೋಷಿಸುತ್ತೀರಾ ಎಂದು ಪ್ರಶ್ನಿಸಿದರು.