ಖಾರವಾದ ವಸ್ತುಗಳನ್ನು ಸೇವಿಸಿದ ಬಳಿಕ ಅಥವಾ ದಿನವಿಡೀ ನೀರು ಕುಡಿಯದೇ ಇರುವುದರಿಂದ ಮಲಬದ್ಧತೆ ಹಾಗೂ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಕೆಲವೊಮ್ಮೆ ನಾವು ಸೇವಿಸುವ ಆಹಾರವೇ ಇದಕ್ಕೆ ಕಾರಣವಾಗಿರಬಹುದು. ಅದರ ನಿವಾರಣೆಗೆ ಕೆಲವು ಮನೆ ಮದ್ದುಗಳಿವೆ.
ಸೋರೆಕಾಯಿಯನ್ನು ಸಣ್ಣದಾಗಿ ಹಚ್ಚಿ ಮಿಕ್ಸಿಯಲ್ಲಿ ರುಬ್ಬಿ ಇದರ ಹಸಿಯಾದ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಮಲಬದ್ಧತೆ ಹಾಗೂ ಉಷ್ಣದ ಸಮಸ್ಯೆ ದೂರವಾಗುತ್ತದೆ. ರುಚಿಗೆ ಬೇಕಿದ್ದರೆ ಚಿಟಿಕೆ ಉಪ್ಪು ಬೆರೆಸಿ. ಇದರಿಂದ ಬಾಯಿ ಹುಣ್ಣು ಕೂಡಾ ಬಹುಬೇಗ ಕಡಿಮೆಯಾಗುತ್ತದೆ.
ಸೋರೆಕಾಯಿಯಲ್ಲಿ ಫೈಬರ್ ಅಂಶ ಹೇರಳವಾಗಿದ್ದು ಅಲರ್ಜಿ, ತುರಿಕೆ, ಉರಿ ಮೂತ್ರದಂಥ ಸಮಸ್ಯೆಗೂ ಇದು ರಾಮಬಾಣ. ಹಸಿ ಸೋರೆಕಾಯಿ ನಿಮ್ಮ ದೇಹಕ್ಕೆ ಉತ್ತಮ ಪ್ರಮಾಣದ ಐರನ್ ಅನ್ನು ಒದಗಿಸುತ್ತದೆ.
ಸ್ಟ್ರೀಟ್ ಫುಡ್ ಹಾಗೂ ಖಾರದ ತಿನಿಸುಗಳಲ್ಲಿ ಉಪ್ಪಿನ ಅಂಶ ಹೆಚ್ಚಿರುವುದರಿಂದ ಇದು ದೇಹದ ತೂಕವನ್ನು ಹೆಚ್ಚಿಸುವ ಅಪಾಯವಿರುತ್ತದೆ. ಹಾಗಾಗಿ ರಸ್ತೆ ಬದಿಯ ತಿನಿಸುಗಳಿಂದ ದೂರವಿದ್ದಷ್ಟು ಒಳ್ಳೆಯದು. ಸೋರೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶ ಇರುವುದರಿಂದ ಸಾಂಬಾರು, ಪಲ್ಯದ ರೂಪದಲ್ಲಿ ಈ ತರಕಾರಿಯನ್ನು ಸೇವಿಸುವುದು ಬಹಳ ಒಳ್ಳೆಯದು.