ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಪೆನ್ ಡ್ರೈವ್ ಪ್ರದರ್ಶನ ವಿಚಾರ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಇಂದು ಕೂಡ ಮಾತನಾಡಿರುವ ಕುಮಾರಸ್ವಾಮಿ ಸ್ಪೀಕರ್ ಒಪ್ಪಿದರೆ ಸದನದಲ್ಲೇ ಪೆನ್ಡ್ರೈವ್ ಪ್ರದರ್ಶನ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸ್ಪೀಕರ್ ಒಪ್ಪಿದರೆ ಸದನದಲ್ಲೇ ಪೆನ್ಡ್ರೈವ್ ಪ್ರದರ್ಶನ ಮಾಡ್ತೇನೆ. ಇಲ್ಲೇ ಆಡಿಯೋ ಹಾಕಿಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ವರ್ಗಾವಣೆ ದಂಧೆ ವಿಚಾರ ಪ್ರತಿಧ್ವನಿಸಿದ್ದು, ವಿಪಕ್ಷಗಳು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ, ಕೋಲಾಹಲ ನಡೆದಿದೆ.ವಿಧಾನಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ವರ್ಗಾವಣೆ ವಿಚಾರವಾಗಿಯೇ ಆತ್ಮಹತ್ಯೆಗೆ ಯತ್ನ ಎಂದು ಡೆತ್ ನೋಟ್ ಬರೆದಿಟ್ಟಿದ್ದಾಗಿ ಹೇಳಿದರು. ಅಲ್ಲದೇ ಇಂಧನ ಇಲಾಖೆಯಲ್ಲಿಯೂ ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸಿದರು.
ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ಎಂದು ಹೇಳುತ್ತಿದ್ದಂತೆ ಇಂಧನ ಸಚಿವ ಕೆ.ಜೆ. ಜಾರ್ಜ್, ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ನನ್ನ ಬಳಿ ಪೆನ್ ಡ್ರೈವ್ ಇದೆ. ಇದರಲ್ಲಿ ಸಾಕ್ಷ್ಯವಿದೆ ಎಂದು ಹೆಚ್.ಡಿ.ಕೆ ಹೇಳುತ್ತಿದ್ದಾರೆ. ಸಾಕ್ಷಿ ಇದ್ದರೆ ಅದನ್ನು ಸ್ಪೀಕರ್ ಅವರಿಗೆ ನೀಡಿ ಎಂದು ಒತ್ತಾಯಿಸಿದರು. ಅನಗತ್ಯವಾಗಿ ತೇಜೋವಧೆ ಮಾಡುವ ಕೆಲಸ ಮಾಡಿದರೆ ನಮಗೂ ಹಾಗೇ ಮಾಡಲು ಬರುತ್ತದೆ ಎಂದು ಗುಡುಗಿದರು.