ಬೆಂಗಳೂರು : ಕರ್ನಾಟಕ ಬಂದ್ ಗೆ ಸರ್ಕಾರ ಬಗ್ಗದಿದ್ದರೆ ಅಕ್ಟೋಬರ್ 5 ರಂದು ಕೃಷ್ಣರಾಜ ಸಾಗರ ಆಣೆಕಟ್ಟಿಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕಾವೇರಿಗಾಗಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಇಂದಿನ ಪ್ರತಿಭಟನೆಗೂ ಸರ್ಕಾರ ಬಗ್ಗದಿದ್ದರೆ ಅಕ್ಟೋಬರ್ 5 ರಂದು ಕೃಷ್ಣರಾಜ ಸಾಗರ ಆಣೆಕಟ್ಟೆಗೆ ಮುತ್ತಿಗೆ ಹಾಕಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ವಾಟಾಳ್ ನಾಗರಾಜ್ ರನ್ನು ಪೊಲೀಸರು ವಶಕ್ಕೆ ಪಡೆದು ಫ್ರೀಡಂ ಪಾರ್ಕ್ ಗೆ ಕರೆದೊಯ್ದಿದ್ದಾರೆ. ಬೆಂಗಳೂರಿನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಮುಖಂಡರು, ಸ್ಯಾಂಡಲ್ ವುಡ್ ನಟ-ನಟಿಯರು ಪ್ರತಿಭಟನೆ ನಡೆಸುತ್ತಿದ್ದು, ಕಾವೇರಿ ನಮ್ಮದು ಎಂದು ಘೋಷಣೆಗಳನ್ನು ಕೂಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.ವಾಟಾಳ್ ನಾಗರಾಜ್ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾಧರಿಸಿ ಬಂದಿರುವ ವಾಟಾಳ್ ನಾಗರಾಜ್, ತಲೆಯ ಮೇಲೆ ಖಾಲಿ ಕೊಡ ಹೊತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಕಾವೇರಿಗಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ರೈತ ಸಂಘಟನೆಗಳ ಪ್ರತಿಭಟನೆ ಭುಗಿಲೆದ್ದಿವೆ.