ಹೆಚ್ಚಿನ ಜನರು ಆಹಾರವನ್ನು ಒಂದೇ ಬದಿಯ ದವಡೆಯಲ್ಲಿ ಜಗಿದು ತಿನ್ನುತ್ತಾರೆ. ಇದು ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಯಾಕೆಂದರೆ ಇದು ಸುಲಭ, ಆರಾಮದಾಯಕವಾಗಿದೆ. ಆದರೆ ದಂತವೈದ್ಯರು ಮಾತ್ರ ಈ ಅಭ್ಯಾಸವನ್ನು ಅಪಾಯಕಾರಿ ಎಂದು ತಿಳಿಸಿದ್ದಾರೆ. ಬಾಯಿಯ ಒಂದು ಬದಿಯನ್ನು ಮಾತ್ರ ಜಗಿಯುವುದು ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದಾಗಿ ತಿಳಿಸಿದ್ದಾರೆ.
ದಂತವೈದ್ಯರು ತಿಳಿಸಿದ ಪ್ರಕಾರ ಯಾವಾಗಲೂ ಒಂದು ಬದಿಯಲ್ಲಿ ಮಾತ್ರ ಆಹಾರ ಜಗಿಯಲು ವೈದ್ಯರು ಸಲಹೆ ನೀಡುವುದಿಲ್ಲ. ಯಾಕೆಂದರೆ ಇದು ಸಾಮಾನ್ಯ ಶಾರೀರಿಕ ಚಲನೆಗೆ ವಿರುದ್ಧವಾಗಿದೆ, ದವಡೆಯ ಎರಡೂ ಬದಿಗಳು ಆಹಾರವನ್ನು ಜಗಿಯುವಂತೆ ವೈದ್ಯರು ಸೂಚಿಸುತ್ತಾರೆ. ಒಂದು ವೇಳೆ ನೀವು ಒಂದು ಬದಿಯಿಂದ ಮಾತ್ರ ಜಗಿಯುತ್ತಿದ್ದರೆ ಇದು ಹಲ್ಲುಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ನೀವು ಹೆಚ್ಚು ಜಗಿಯಲು ಬಳಸಿದ ಹಲ್ಲು ಸವೆಯುತ್ತದೆ ಮತ್ತು ಇನ್ನೊಂದು ಬದಿಯ ಹಲ್ಲಿನಲ್ಲಿ ಕೊಳಕು ಸಂಗ್ರಹವಾಗಿ ಸೋಂಕು ಉಂಟಾಗಬಹುದು ಎಂಬುದಾಗಿ ದಂತವೈದ್ಯರು ತಿಳಿಸಿದ್ದಾರೆ.
ಅಲ್ಲದೇ ಜಗಿಯುವ ಬದಿಯಲ್ಲಿರುವ ಸ್ನಾಯುಗಳು ಜಗಿಯದ ಬದಿಯಲ್ಲಿರುವ ಸ್ನಾಯುಗಳಿಗಿಂತ ಹೆಚ್ಚು ಬೆಳೆಯುತ್ತವೆ, ಇದು ಮುಖದ ಆಕಾರವನ್ನು ಕೆಡಿಸುತ್ತದೆ. ಮತ್ತು ಇದು ದವಡೆ ಕೀಲಿನ ಸವೆತಕ್ಕೆ ಕಾರಣವಾಗುತ್ತದೆ. ಇದರಿಂದ, ರೋಗಿಗಳು ಬಾಯಿ ತೆರೆಯುವಾಗ ಮತ್ತು ಮುಚ್ಚುವಾಗ ಕಿವಿಯ ಬಳಿ ನೋವು ಅಥವಾ ಕೀಲುಗಳಲ್ಲಿ ಕ್ಲಿಕ್ ಮಾಡುವ ಶಬ್ದವನ್ನು ಅನುಭವಿಸುತ್ತಾರೆ.
ಹಾಗಾಗಿ ಬಾಯಿಯ ಆರೋಗ್ಯಕ್ಕಾಗಿ ಬಾಯಿಯ ಎರಡೂ ಬದಿಗಳನ್ನು ಸಮಾನವಾಗಿ ಬಳಸುವುದು ಮತ್ತು ನಿಧಾನವಾಗಿ ಜಗಿಯುವುದನ್ನು ಅಭ್ಯಾಸಮಾಡಿಕೊಳ್ಳಿ. ಇದು ಹಲ್ಲುಗಳ ಮೇಲೆ ಅತಿಯಾದ ಒತ್ತಡ ಮತ್ತು ಸವೆತವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಪೆನ್ಸಿಲ್ಗಳು, ಪೆನ್ನುಗಳು ಅಥವಾ ಐಸ್ನಂತಹ ಗಟ್ಟಿಯಾದ ವಸ್ತುಗಳನ್ನು ಜಗಿಯುವುದರಿಂದ ಹಲ್ಲುಗಳು ಹಾನಿಗಳಗಾಗುತ್ತವೆ. ಹಾಗಾಗಿ ಇದನ್ನು ತಪ್ಪಿಸಿ ಎಂದು ದಂತ ವೈದ್ಯರು ಸಲಹೆ ನೀಡಿದ್ದಾರೆ.