ಕೊರೊನಾ ವೈರಸ್ ಅನೇಕರ ಬದುಕು ಬದಲಿಸಿದೆ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯ ಪ್ರಾಣ ತೆಗೆದಿದೆ. ಇದ್ರಿಂದ ಕುಟುಂಬಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೃತ ವ್ಯಕ್ತಿ ಬ್ಯಾಂಕ್ ಖಾತೆಯಲ್ಲಿರುವ ಹಣ ವಿತ್ ಡ್ರಾದಿಂದ ಹಿಡಿದು ಆಸ್ತಿ, ವಿಮೆ ವರ್ಗಾವಣೆಯವರೆಗೆ ಅನೇಕ ಸಮಸ್ಯೆ ಎದುರಾಗ್ತಿದೆ.
ಒಬ್ಬ ವ್ಯಕ್ತಿ ಹಠಾತ್ ಸಾವನ್ನಪ್ಪಿದಾಗ ಅಥವಾ ಖಾತೆಗೆ ನಾಮನಿರ್ದೇಶನ ಮಾಡಿಲ್ಲ ಎಂದಾಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇದನ್ನು ಎರಡು ಭಾಗವಾಗಿ ವಿಂಗಡಿಸಲಾಗುತ್ತದೆ. ಮೊದಲನೆಯದು 5 ಲಕ್ಷ ರೂಪಾಯಿಗಿಂತ ಕಡಿಮೆ ಹಣ ಮತ್ತು ಎರಡನೆಯದು 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತ. ಮೊತ್ತವು 5 ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೆ ಮರಣ ಪ್ರಮಾಣಪತ್ರ, ಕಾನೂನು ಉತ್ತರಾಧಿಕಾರಿಯ ಕೆವೈಸಿ ವಿವರಗಳು, ಹಕ್ಕುದಾರರ ಖಾತೆ ವಿವರಗಳು, ಹಕ್ಕು ರೂಪದಲ್ಲಿ ಕಾನೂನು ಉತ್ತರಾಧಿಕಾರಿಗಳ ಘೋಷಣೆ ಸೇರಿದಂತೆ ಕೆಲ ದಾಖಲೆ ನೀಡಬೇಕಾಗುತ್ತದೆ. ಕಾನೂನು ಉತ್ತರಾಧಿಕಾರಿಗಳ ಘೋಷಣೆಗೆ ಕುಟುಂಬವನ್ನು ಚೆನ್ನಾಗಿ ತಿಳಿದಿರುವ, ಆದರೆ ಸಂಬಂಧವಿಲ್ಲದ ಮತ್ತು ಬ್ಯಾಂಕನ್ನು ನಂಬುವ ವ್ಯಕ್ತಿ ಸಹಿ ಮಾಡಬೇಕು. ಇದರಲ್ಲಿ, ಯಾವುದೇ ಸರ್ಕಾರಿ ಅಧಿಕಾರಿಯ ಸಹಿಯನ್ನು ಪಡೆಯಬಹುದು.
ಮೊತ್ತವು 5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಎಲ್ಲಾ ದಾಖಲೆಗಳು ಮೊದಲಿನಂತೆ ಅಗತ್ಯವಿರುತ್ತದೆ. ಆದರೆ ಕಾನೂನು ಉತ್ತರಾಧಿಕಾರಿಗಳ ಘೋಷಣೆಗೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಥವಾ ನೋಟರಿ ಪಬ್ಲಿಕ್ ರಿಂದ ಮಾಡಿದ ಅಫಿಡವಿಟ್ ಅಗತ್ಯವಿದೆ. ಕುಟುಂಬವನ್ನು ತಿಳಿದಿರುವ ವ್ಯಕ್ತಿ ಅಥವಾ ಯಾವುದೇ ಸರ್ಕಾರಿ ಅಧಿಕಾರಿ ಸಹಿ ಹಾಕಬೇಕಾಗುತ್ತದೆ.
ಪಿಪಿಎಫ್, ಎನ್‌ಎಸ್‌ಸಿ ಮುಂತಾದ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳಿಂದ ಹಣವನ್ನು ಪಡೆಯಲು, ಉತ್ತರಾಧಿಕಾರಿ ಬಳಿ ಕಾನೂನು ದಾಖಲೆ ಇದೆಯೇ ಎಂಬುದನ್ನು ನೋಡುತ್ತಾರೆ. ಹಣ 5 ಲಕ್ಷಕ್ಕಿಂತ ಹೆಚ್ಚಿದ್ದರೆ ಕೋರ್ಟ್ ನಿಂದ ಉತ್ತರಾಧಿಕಾರಿ ಸರ್ಟಿಫಿಕೇಟ್ ಅಗತ್ಯವಿರುತ್ತದೆ. 5 ಲಕ್ಷಕ್ಕಿಂತ ಕಡಿಮೆ ಹಣವಿದ್ದಲ್ಲಿ 6 ತಿಂಗಳ ನಂತ್ರ ಕೆಲ ದಾಖಲೆಗಳನ್ನು ಪರಿಶೀಲಿಸಿ ಹಣ ನೀಡಲಾಗುತ್ತದೆ.
ಜೀವ ವಿಮಾ ಹಣವನ್ನು ಪಡೆಯಲು ಕೆಲ ಅಗತ್ಯ ದಾಖಲೆ ನೀಡಬೇಕು. ಮರಣ ಹೊಂದಿದ ವ್ಯಕ್ತಿಯ ಮರಣ ಪ್ರಮಾಣಪತ್ರ, ಪಾಲಿಸಿಯ ದಾಖಲೆಗಳು ಸೇರಿದಂತೆ ಕೆಲ ದಾಖಲೆ ಅಗತ್ಯವಿದೆ. ಮೃತನು ನಾಮಿನಿ ಘೋಷಣೆ ಮಾಡಿಲ್ಲವಾದಲ್ಲಿ ಕಾನೂನು ಉತ್ತರಾಧಿಕಾರಿ ಎಂದು ಸಾಬೀತುಪಡಿಸಲು ಕಾನೂನು ದಾಖಲೆ ನೀಡಬೇಕಾಗುತ್ತದೆ.
ಮನೆ, ಆಸ್ತಿ ಹಸ್ತಾಂತರ ವಿಷ್ಯದಲ್ಲೂ ಕೆಲ ದಾಖಲೆ ನೀಡಬೇಕು. ನಿಮ್ಮನ್ನು ಉತ್ತರಾಧಿಕಾರಿಯೆಂದು ಘೋಷಿಸದೆ ಹೋದಲ್ಲಿ ಕುಟುಂಬ ಸದಸ್ಯರ ಒಪ್ಪಿಗೆ ಅಗತ್ಯವಿರುತ್ತದೆ. ಅಫಿಡವಿಟ್ ನೀಡಬೇಕಾಗುತ್ತದೆ.