ಭಾರತ ಸರ್ಕಾರ ಉಕ್ರೇನ್ ನಿಂದ ಭಾರತೀಯ ವಿದ್ಯಾರ್ಥಿಗಳನ್ನ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ವಿಚಿತ್ರ ಬೇಡಿಕೆ ಇಟ್ಟಿದ್ದು, ಅದು ಈಡೇರದಿದ್ದರೆ ನಾನು ಈ ಜಾಗ ಬಿಟ್ಟು ಬರಲೊಲ್ಲೆ ಎಂದು ಪಟ್ಟು ಹಿಡಿದಿದ್ದಾನೆ.
ಹೌದು, ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತದ ಎಂಜಿನಿಯರಿಂಗ್ ವಿದ್ಯಾರ್ಥಿ, ತನ್ನ ಮುದ್ದಿನ ನಾಯಿಯನ್ನು ತೊರೆದು ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಪೂರ್ವ ಉಕ್ರೇನ್‌ನ ಖಾರ್ಕೀವ್ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ರೇಡಿಯೋ ಎಲೆಕ್ಟ್ರಾನಿಕ್ಸ್ ಅಧ್ಯಯನ ಮಾಡುತ್ತಿರುವ ರಿಷಬ್ ಕೌಶಿಕ್ ಎಂಬ ವಿದ್ಯಾರ್ಥಿ, ತನ್ನನ್ನು ಏರ್‌ಲಿಫ್ಟ್ ಮಾಡುವಾಗ ತನ್ನೊಂದಿಗೆ ನಾಯಿಯನ್ನೂ ಕರೆದುಕೊಂಡು ಬರಲು ಅನುಮತಿ ಪಡೆಯಲು ಎಲ್ಲಾ ದಾಖಲೆ ಸಲ್ಲಿಕೆಗೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ.
ರಷ್ಯಾ –ಉಕ್ರೇನ್ ಬಿಕ್ಕಟ್ಟಿನ ನಡುವೆ ಪುಟಿನ್ ಗೆ ಶಾಕ್
ಈಗಾಗಲೇ ನಾಯಿಯ ಸ್ಥಳಾಂತರಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇನೆ, ಆದರೆ ಅಧಿಕಾರಿಗಳು ಇನ್ನಷ್ಟೂ ದಾಖಲೆಗಳನ್ನು ಕೇಳುತ್ತಲೇ ಇರುವುದರಿಂದ ತನ್ನ ಪ್ರಯತ್ನ ಮಣ್ಣುಪಾಲಾಗಿದೆ. ನನ್ನ ನಾಯಿಯೊಂದಿಗೆ ಭಾರತಕ್ಕೆ ಮರಳಲು ಅನುಮತಿ ದೊರೆತಿಲ್ಲ. ಹಾಗಾಗಿ ನಾನು ಇಲ್ಲೇ ಉಳಿಯಲು ನಿರ್ಧರಿಸಿದ್ದೇನೆ. ಇಲ್ಲಿರುವುದು ಅಪಾಯ ಎಂದು ತಿಳಿದಿದೆ ಆದರೆ, ನನ್ನ ನಾಯಿಯನ್ನು ಬಿಟ್ಟು ಬರುವುದು ಸಾಧ್ಯವಿಲ್ಲ. ನಾನೇ ಅವನನ್ನು ತೊರೆದರೆ ಯಾರು ನೋಡಿಕೊಳ್ಳುತ್ತಾರೆ ಎಂದು ಕೌಶಿಕ್ ತಿಳಿಸಿದ್ದಾರೆ.
“ಅವರು ನನ್ನ ಬಳಿ ನನ್ನ ವಿಮಾನದ ಟಿಕೆಟ್ ಕೇಳುತ್ತಿದ್ದಾರೆ. ಉಕ್ರೇನ್ ವಾಯು ವಲಯವನ್ನೆ ಮುಚ್ಚಿರುವಾಗ ನನಗೆ ವಿಮಾನ ಟಿಕೆಟ್ ಸಿಗುವುದು ಹೇಗೆ ಸಾಧ್ಯ? ಎಂದು ಕೌಶಿಕ್ ಪ್ರಶ್ನಿಸಿದ್ದಾನೆ.
ದೆಹಲಿಯಲ್ಲಿರುವ ಭಾರತ ಸರ್ಕಾರದ ಅನಿಮಲ್ ಕ್ವಾರೆಂಟೈನ್ ಆಂಡ್ ಸರ್ಟಿಫಿಕೇಷನ್ ಸರ್ವೀಸ್ (ಎಕ್ಯೂಸಿಎಸ್) ಹಾಗೂ ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು ಯಾವ ಪ್ರಯೋಜನವಾಗಿಲ್ಲ ಎಂದು ಕೌಶಿಕ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾನೆ.
ತನ್ನ ಪರಿಸ್ಥಿತಿ ಬಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ವಿವರಿಸಿದ್ದೇನೆ. ಆದರೆ, ಆ ವ್ಯಕ್ತಿ ಯಾವುದೇ ಸಹಕಾರ ನೀಡಿಲ್ಲ, ಜೊತೆಗೆ ತನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ಕೌಶಿಕ್ ಆರೋಪಿಸಿದ್ದಾನೆ.
ಭಾರತ ಸರ್ಕಾರವು ನನಗೆ ಕಾನೂನಿಗೆ ಅನುಗುಣವಾಗಿ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿದ್ದರೆ ನಾನು ಈ ಹೊತ್ತಿಗೆ ಭಾರತದಲ್ಲಿ ಇರುತ್ತಿದ್ದೆ. ಈಗಲೂ ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಕ್ಷಿಪಣಿಗಳ ದಾಳಿಗಳನ್ನು ಮುಂದುವರಿಸಿವೆ. ನಾನು ಬಂಕರ್ ಒಂದರಲ್ಲಿ ಅಡಗಿ ಕುಳಿತಿದ್ದೇನೆ ಎಂದು ಕೌಶಿಕ್ ಮಾಹಿತಿ ನೀಡಿದ್ದಾನೆ.
ಇದೇ ವೇಳೆ 2021ರಲ್ಲಿ ನಾಯಿಯನ್ನು ಮಲಿಬು ಬೀಚ್ ನಲ್ಲಿ ರಕ್ಷಿಸಿದ ಬಗ್ಗೆ, ಅಂದಿನಿಂದ ಇಂದಿನವರೆಗೂ ಅದನ್ನು ಸಾಕುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೌಶಿಕ್, ನನಗೆ ದಯವಿಟ್ಟು ಸಹಾಯ ಮಾಡಿ ಎಂದು ಭಾರತ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾನೆ.