ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಮದುವೆಯೊಂದರಲ್ಲಿ ವರ ದೊಡ್ಡ ಮೊತ್ತದ ವರದಕ್ಷಿಣೆಯನ್ನು ನಿರಾಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪರಮ್‌ವೀರ್ ರಾಥೋಡ್ ಎಂಬ ಯುವಕ ಫೆಬ್ರವರಿ 14 ರಂದು ಕರಾಲಿಯಾ ಗ್ರಾಮದಲ್ಲಿ ನಿಕಿತಾ ಭಾಟಿ ಅವರನ್ನು ವಿವಾಹವಾದರು. “ತಿಲಕ್” ಸಮಾರಂಭದಲ್ಲಿ ವಧುವಿನ ಕಡೆಯವರು 5,51,000 ರೂಪಾಯಿ ನಗದು ತುಂಬಿದ ತಟ್ಟೆಯನ್ನು ವರದಕ್ಷಿಣೆಯ ಸಂಪ್ರದಾಯದ ಭಾಗವಾಗಿ ನೀಡಿದ್ದರು.
ಆದರೆ, ರಾಥೋಡ್ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲು ನಿರ್ಧರಿಸಿದ್ದು “ನಾನು ಬಹಳಷ್ಟು ಅಧ್ಯಯನ ಮಾಡಿದ್ದೇನೆ ಮತ್ತು ವಿದ್ಯಾವಂತರು ಇಂತಹ ನಿಲುವು ತೆಗೆದುಕೊಳ್ಳದಿದ್ದರೆ ಯಾರು ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸಿದೆ ? ನಾವು ಒಂದು ಮಾದರಿಯಾಗಿರಬೇಕು” ಎಂದಿದ್ದಾರೆ.
ಅವರ ತಂದೆ ಈಶ್ವರ್ ಸಿಂಗ್, ರೈತರಾಗಿದ್ದು ತಮ್ಮ ಮಗನ ಅಭಿಪ್ರಾಯಗಳನ್ನು ಅನುಮೋದಿಸಿದ್ದಾರೆ. “ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ” ಎಂದು ಅವರು ಹೇಳಿ “ನಾವು ತೆಂಗಿನಕಾಯಿ ಮತ್ತು ಒಂದು ರೂಪಾಯಿ ನಾಣ್ಯವನ್ನು ಮಾತ್ರ ಆಚರಣೆಯ ಭಾಗವಾಗಿ ಸ್ವೀಕರಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಸಮಾರಂಭದ ನಂತರ, ದಂಪತಿಗಳು ತಮ್ಮ ಊರಿಗೆ ಹಿಂದಿರುಗಿದ್ದು, ಬಳಿಕ ಸ್ನಾತಕೋತ್ತರ ವಿದ್ಯಾರ್ಥಿನಿಯಾದ ಭಾಟಿ ತಮ್ಮ ಅಧ್ಯಯನವನ್ನು ಪುನರಾರಂಭಿಸಿ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ.