ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗಿಂತ ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುವ ಮಕ್ಕಳಿಗೆ ಉಸಿರಾಟದ ಸೋಂಕಿನ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಡೇ ಕೇರ್, ಒದ್ದೆಯಾದ ಥಂಡಿ ಮನೆಗಳಲ್ಲಿ ವಾಸಿಸುವುದು ಅಥವಾ ಹೆಚ್ಚಿನ ದಟ್ಟಣೆಯ ಪ್ರದೇಶಗಳ ವಾಸ ಚಿಕ್ಕ ಮಕ್ಕಳಲ್ಲಿ ಉಸಿರಾಟದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಸ್ತನ್ಯಪಾನವು ಈ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಟಲಿಯಲ್ಲಿ ಕೈಗೊಂಡಿದ್ದ ಈ ಅಧ್ಯಯನದಲ್ಲಿ 663 ಮಕ್ಕಳು ಮತ್ತು ಅವರ ತಾಯಂದಿರನ್ನು ತಪಾಸಣೆ ಮಾಡಲಾಗಿದೆ. ತಾಯಂದಿರನ್ನು ಗರ್ಭಾವಸ್ಥೆಯಿಂದ ಹಿಡಿದು ಮಕ್ಕಳಿಗೆ ಮೂರು ವರ್ಷ ವಯಸ್ಸಾಗುವವರೆಗೂ ಸಂಶೋಧನೆಗೆ ಒಳಪಡಿಸಲಾಗಿದೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರು ಮತ್ತು ನವಜಾತ ಶಿಶುಗಳ ರಕ್ತದ ವಿವರವಾದ ಪರೀಕ್ಷೆಯನ್ನು ಸಂಶೋಧಕರು ನಡೆಸಿದ್ದಾರೆ. ಮಕ್ಕಳಿಗೆ 4 ವಾರಗಳಾದಾಗ ಅವರ ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ವಿಶ್ಲೇಷಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ದುರ್ಬಲ ರೋಗನಿರೋಧಕ ಶಕ್ತಿಗೆ ಕಾರಣ…
ನಗರ ಪ್ರದೇಶಗಳಲ್ಲಿ ಮಾಲಿನ್ಯ, ಧೂಳು ಮತ್ತು ಇತರ ಹಾನಿಕಾರಕ ವಸ್ತುಗಳಿಗೆ ಒಡ್ಡಿಕೊಳ್ಳುವುದರಿಂದ ಮಕ್ಕಳ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ನಗರಗಳಲ್ಲಿ ವಾಸಿಸುವ ಮಕ್ಕಳನ್ನು ಡೇ ಕೇರ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ಇತರ ಮಕ್ಕಳೊಂದಿಗೆ ಸಂಪರ್ಕಕ್ಕೆ ಬರುತ್ತಾರೆ, ಅವರಿಂದಲೂ ಸೋಂಕು ತಗುಲಬಹುದು. ಒದ್ದೆಯಾದ ಮನೆಗಳಲ್ಲಿ ವಾಸಿಸುವ ಮಕ್ಕಳು ಉಸಿರಾಟದ ಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಸ್ತನ್ಯಪಾನವು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಉಸಿರಾಟದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ತಾಯಂದಿರು ಮಗುವಿಗೆ ಎದೆಹಾಲುಣಿಸಲು ಮುಂದಾಗಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.