ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಿದೆ. ಚಿಕ್ಕವರಿರುವಾಗ ಮಕ್ಕಳ ತಪ್ಪನ್ನು ಸುಲಭವಾಗಿ ತಿದ್ದಬಹುದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವ್ರ ತಪ್ಪನ್ನು ಎತ್ತಿ ಹೇಳಿ ಸರಿಪಡಿಸೋದು ಕಷ್ಟ. ಹಾಗೆ ಕೆಲವೊಂದು ಒಳ್ಳೆ ಹವ್ಯಾಸ,ಅಭ್ಯಾಸಗಳನ್ನು ಕೂಡ ಚಿಕ್ಕವರಿರುವಾಗ್ಲೇ ರೂಢಿ ಮಾಡಿದ್ರೆ ಒಳ್ಳೆಯದು.
ಮಕ್ಕಳಿಗೆ ಪಾಠದ ಜೊತೆ ಆರೋಗ್ಯದ ಬಗ್ಗೆಯೂ ತಿಳುವಳಿಕೆ ನೀಡಬೇಕು.ಆರೋಗ್ಯವೇ ಭಾಗ್ಯ ಎಂಬುದು ಮಕ್ಕಳಿಗೆ ಗೊತ್ತಾಗುವುದು ಇತ್ತೀಚಿನ ದಿನಗಳಲ್ಲಿ ಅತಿ ಮುಖ್ಯ.
ಮಕ್ಕಳು ಆರೋಗ್ಯವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಮಕ್ಕಳಿಗೆ ಒಳ್ಳೆ ಆಹಾರ ನೀಡಿದ್ರೆ ಸಾಲದು ಸೂರ್ಯೋದಯಕ್ಕಿಂತ ಮೊದಲೇ ಮಕ್ಕಳನ್ನು ಏಳಿಸಬೇಕು. ಸೂರ್ಯೋದಯದ ನಂತ್ರವೂ ಮಲಗಿರುವ ಮಕ್ಕಳು ಸೋಮಾರಿಗಳಾಗುತ್ತಾರೆ. ಇಡೀ ದಿನ ನಿದ್ರೆ ಮಂಪರಿನಲ್ಲಿರುತ್ತಾರೆ.
ಬೆಳಿಗ್ಗೆ ಹಾಸಿಗೆಯಿಂದ ಎದ್ದ ಮೇಲೆ ಬಾತ್ ರೂಮಿಗೆ ಕರೆದೊಯ್ಯುವುದನ್ನು ರೂಢಿ ಮಾಡಿ. ಹಲ್ಲು ಉಜ್ಜಿ. ಬ್ರೆಷ್ ನಲ್ಲಿ ಹಲ್ಲುಜ್ಜುವ ಮೊದಲು ಹಲ್ಲುಜ್ಜುವ ಸರಿಯಾದ ವಿಧಾನವನ್ನು ಅವರಿಗೆ ತಿಳಿಸಿ. ಬೇರೆಯವರ ಬ್ರೆಷ್ ಬಳಸದಂತೆ ಸೂಚನೆ ನೀಡಿ.
ಉದ್ದ ಹಾಗೂ ಕೊಳಕು ಉಗುರು ಆರೋಗ್ಯಕ್ಕೆ ಹಾನಿಕರ. ಹಾಗಾಗಿ ವಾರಕ್ಕೊಮ್ಮೆ ಉಗುರು ಕತ್ತರಿಸಿ. ಉದ್ದದ ಉಗುರು ಅಪಾಯಕಾರಿ ಎಂಬ ಸಂಗತಿಯನ್ನು ಮಕ್ಕಳಿಗೆ ತಿಳಿ ಹೇಳಿ. ಉಗುರು ಕಚ್ಚದಂತೆ ಸಲಹೆ ನೀಡಿ.
ಬಹುತೇಕ ಮಕ್ಕಳು ಆಹಾರ ತಿನ್ನುವುದಿಲ್ಲ. ಬೇಡಗಳ ಪಟ್ಟಿ ಹೆಚ್ಚಿರುತ್ತದೆ. ಈ ವೇಳೆ ಮಕ್ಕಳಿಗೆ ಬೈದು,ಹೊಡೆದು ಮಾಡುವ ಬದಲು ಆಹಾರ ಎಷ್ಟು ಮುಖ್ಯ ಎಂಬುದನ್ನು ತಿಳಿಸಿ. ಜೊತೆಗೆ ಆರೋಗ್ಯಕರ ಯಾವುದೇ ಆಹಾರ ಸಿಕ್ಕರೂ ತಿನ್ನಬೇಕೆಂದು ಮಕ್ಕಳಿಗೆ ಬುದ್ದಿ ಹೇಳಿ.
ಇಷ್ಟೇ ಅಲ್ಲ ನಿತ್ಯ ಸ್ನಾನ ಮಾಡಿದ್ರೆ ಏನೆಲ್ಲ ಪ್ರಯೋಜನ ಎಂಬುದನ್ನು ಮಕ್ಕಳಿಗೆ ಹೇಳಬೇಕು. ಪುಸ್ತಕ ತೆಗೆಯುವಾಗ ಎಂಜಲು ಹಚ್ಚಬಾರದು ಎಂದು ತಿಳಿಸಿ. ಜೊತೆಗೆ ಕಿವಿ, ಕಣ್ಣಿನ ಮಹತ್ವವನ್ನು ಹೇಳಿ. ಚಿಕ್ಕವರಿರುವಾಗಲೇ ಮಕ್ಕಳಿಗೆ ಸಣ್ಣ ಸಣ್ಣ ವಿಷ್ಯಗಳನ್ನು ಸರಿಯಾಗಿ ವಿವರಿಸಿದ್ರೆ ಅವ್ರು ಸುಲಭವಾಗಿ ಅರ್ಥ ಮಾಡಿಕೊಳ್ತಾರೆ.