ನಮ್ಮ ದೇಹಕ್ಕೆ ಅಗತ್ಯವಾಗಿ ಕ್ಯಾಲ್ಸಿಯಂ ಬೇಕಾಗುತ್ತದೆ. ಕ್ಯಾಲ್ಸಿಯಂ ಕಡಿಮೆಯಾದರೆ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೂಳೆಗಳ ಬೆಳವಣಿಗೆಗೆ ಈ ಕ್ಯಾಲ್ಸಿಯಂ ಅತ್ಯಗತ್ಯ. ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದು ಹೇಗೆ ಕಂಡುಹಿಡಿಯುವುದು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಮಾಹಿತಿ.
*ಮಾಂಸಖಂಡಗಳಲ್ಲಿ ಹಿಡಿದಂತೆ ಆಗುವುದು, ಕಾಲಿನ ಗಂಟಿನಲ್ಲಿ ನೋವು ಕಾಣಿಸಿಕೊಳ್ಳುವುದು ಇವೆಲ್ಲವೂ ಕ್ಯಾಲ್ಸಿಯಂನ ಕೊರತೆಯ ಲಕ್ಷಣಗಳು. ಆರಂಭದ ಹಂತದಲ್ಲಿಯೇ ಇದನ್ನು ಗುರುತಿಸಿ ಸರಿಯಾದ ಔಷದೋಪಚಾರ ಮಾಡಿದರೆ ಒಳ್ಳೆಯದು.
*ನಿದ್ರಾಹೀನತೆ, ಕಿರಿಕಿರಿ, ಸುಸ್ತು , ಮೂಳೆ ಮುರಿತ, ಆಗಾಗ ಬರುವ ಹಲ್ಲು ನೋವು ಕೂಡ ಈ ಕ್ಯಾಲ್ಸಿಯಂ ಕೊರತೆಯ ಲಕ್ಷಣವಾಗಿದೆ.
* ಈ ಕ್ಯಾಲ್ಸಿಯಂ ಅಂಶ ಕಡಿಮೆಯಾದರೆ ಇದರ ಲಕ್ಷಣಗಳು ನಮ್ಮ ತ್ವಚೆಯ ಮೇಲೂ ಕಾಣಿಸಿಕೊಳ್ಳುತ್ತದೆ. ಚರ್ಮ ಒಣಗಿದಂತೆ ಆಗುವುದು, ತುರಿಕೆ ಕಾಣಿಸಿಕೊಳ್ಳುವುದು ಈ ಕ್ಯಾಲ್ಸಿಯಂ ಸಮಸ್ಯೆಯಿಂದ ಆಗುತ್ತದೆ. ಹಾಗೇ ಕೈ ಉಗುರಿನಲ್ಲಿ ಬಿಳಿ ಚುಕ್ಕೆ ಕಾಣಿಸಿಕೊಳ್ಳುವುದು, ಉಗುರು ಪದೇ ಪದೇ ತುಂಡಾಗುವುದು ಕೂಡ ಕ್ಯಾಲ್ಸಿಯಂ ಕೊರತೆಯ ಲಕ್ಷಣ.
ಉಸಿರಾಟದಲ್ಲಿ ತೊಂದರೆ, ಎದೆನೋವು ಕಾಣಿಸಿಕೊಳ್ಳುವುದು, ಎಂಜಲು ನುಂಗುವುದಕ್ಕೆ ಕಷ್ಟವಾಗುವುದು, ಕೂದಲು ಉದುರುವುದು ಕೂಡ ಕ್ಯಾಲ್ಸಿಯಂ ಕೊರತೆಯ ಲಕ್ಷಣವಾಗಿದೆ.
ಕ್ಯಾಲ್ಸಿಯಂ ಭರಿತ ಆಹಾರಗಳಾದ ಸೊಪ್ಪು, ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ. ವೈದ್ಯರನ್ನು ಭೇಟಿಯಾಗಿ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಂಡು ಆರಂಭದ ಹಂತದಲ್ಲಿಯೇ ಇದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು.