ಐಸಿಸಿ ಟಿ 20 ವರ್ಲ್ಡ್ ಕಪ್ ಪಂದ್ಯಾವಳಿಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನವು ಅಭಿಮಾನಿಗಳಲ್ಲಿ ಭಾರೀ ನಿರಾಶೆಯನ್ನು ಹುಟ್ಟುಹಾಕಿದೆ . ಇದೇ ವಿಚಾರವಾಗಿ ಮಾತನಾಡಿದ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಪ್ರಸಿದ್ಧ ಆಟಗಾರರನ್ನೇ ನಂಬಿ ಕೂರುವುದಕ್ಕಿಂತ ಹೊಸ ಮುಖಗಳಿಗೆ ಅವಕಾಶ ನೀಡಲು ಇದು ಸಕಾಲ ಎನಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವ ಹಾದಿ ಇದೀಗ ತುಂಬಾನೇ ಕಠಿಣವಾಗಿದೆ. ನ್ಯೂಜಿಲೆಂಡ್ ತಂಡವನ್ನು ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮಿಬಿಯಾ ತಂಡಗಳು ಸೋಲಿಸುವಲ್ಲಿ ಯಶಸ್ವಿಯಾದಲ್ಲಿ ಮಾತ್ರ ಟೀಂ ಇಂಡಿಯಾಗೆ ಸೆಮಿಸ್ನಲ್ಲಿ ಆಡಲು ಅವಕಾಶವಿದೆ. ಆದರೆ ಇದು ಸೂಕ್ತವಾದ ಮಾರ್ಗವಲ್ಲ. ಟೀಂ ಇಂಡಿಯಾ ಆಟಗಾರರು ಸ್ವಂತ ಬಲದಿಂದ ಮುನ್ನುಗ್ಗಬೇಕು. ಬೇರೆ ತಂಡವನ್ನು ಅವಲಂಬಿಸುವುದು ಶೋಭೆ ತರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.
ಉಳಿದ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರಗಳನ್ನು ಆಧರಿಸಿ ಟೀಂ ಇಂಡಿಯಾ ಯಶಸ್ಸನ್ನು ಪಡೆದರೆ ಇದನ್ನು ಅಭಿಮಾನಿಗಳು ಮೆಚ್ಚುವುದಿಲ್ಲ. ನೀವು ವರ್ಲ್ಡ್ ಕಪ್ ಗೆಲ್ಲಲೇಬೇಕು ಎಂದಿಕೊಂಡಿದ್ದರೆ ಸ್ವಂತ ಬಲದಿಂದ ಸೆಮಿಫೈನಲ್ಗೆ ಅರ್ಹತೆ ಪಡೆಯಬೇಕು. ನನಗೆ ತಿಳಿದ ಮಟ್ಟಿಗೆ ಟೀಂ ಇಂಡಿಯಾ ಆಯ್ಕೆ ಮಂಡಳಿ ಪ್ರಸಿದ್ಧ ಆಟಗಾರರ ಕ್ರಿಕೆಟ್ ಭವಿಷ್ಯದ ಬಗ್ಗೆ ಯೋಚಿಸುವ ಸಮಯ ಇದಾಗಿದೆ. ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ನೂರೆಂಟು ಕಾರಣಗಳನ್ನು ನೀಡಬಹುದು. ಆದರೆ ಐಪಿಎಲ್ನಲ್ಲಿ ಸಾಕಷ್ಟು ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇವರನ್ನು ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಗೆ ಸೇರಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಟೀಂ ಇಂಡಿಯಾದ ಮುಂದಿನ ಪೀಳಿಗೆಯನ್ನು ಬಲಪಡಿಸಲೇಬೇಕಿದೆ. ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಎನಿಸುತ್ತಿಲ್ಲವೇ..? ಅವರು ಸೋತರೂ ಅದರಿಂದ ನಷ್ಟವಿಲ್ಲ, ಏಕೆಂದರೆ ಅವರಿಗೆ ಕಲಿಯಲು ಅವಕಾಶ ಸಿಕ್ಕಂತೆ ಆಗುತ್ತದೆ. ಆದರೆ ಹಿರಿಯ ಆಟಗಾರರೇ ಈ ರೀತಿ ಪ್ರದರ್ಶನ ನೀಡಿದರೆ ಆಗ ಟೀಕೆಗಳು ಹೆಚ್ಚಾಗಿ ಕೇಳಬೇಕಾಗಿ ಬರುತ್ತದೆ. ಈ ಬಗ್ಗೆ ಬಿಸಿಸಿಐ ಗಂಭೀರವಾಗಿ ಯೋಚಿಸಬೇಕಿದೆ ಎಂದು ಹೇಳಿದ್ರು.