ಕೆಲವು ಗರ್ಭಿಣಿಯರು ಆಗಾಗ ತಮ್ಮ ಹೊಟ್ಟೆಯನ್ನು ನಿರಂತರವಾಗಿ ಸ್ಪರ್ಶಿಸುವುದು, ತಟ್ಟುವುದು, ಕೈಯಾಡಿಸುವಂತಹ ಕೆಲಸಗಳನ್ನು ಮಾಡುತ್ತಾರೆ. ಇದು ಅವರಿಗೆ ಹಿತವೆನಿಸುತ್ತದೆ. ಆದರೆ ಅವರು ತಮ್ಮ ಹೊಟ್ಟೆಯ ಮೇಲಿಂದ ಕೈಯಾಡಿಸಿದರೆ ಅದರ ಅನುಭವ ಮಗುವಿಗೆ ಆಗುತ್ತದೆಯೇ? ಎಂಬ ಗೊಂದಲ ಹಲವರಲ್ಲಿದೆ. ಹಾಗಾದ್ರೆ ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ನಿಮ್ಮ ಹೊಟ್ಟೆಯ ಮೇಲೆ ಕೈಯಾಡಿಸಿದರೆ ನಿಮ್ಮ ಮಗುವಿಗೆ ಏನು ಅನಿಸುತ್ತದೆ ಎಂಬ ಬಗ್ಗೆ ಆಶ್ಚರ್ಯಕರವಾದ ಮಾಹಿತಿ ತಿಳಿದುಕೊಳ್ಳಿ.
ಗರ್ಭಿಣಿ ಹೊಟ್ಟೆಯ ಮೇಲೆ ಕೈಯಾಡಿಸಿದರೆ ಮಗು ಅದನ್ನು ಅನುಭವಿಸಬಹುದೇ?
ವಿಜ್ಞಾನ ಪ್ರಕಾರ ನಿಮ್ಮ ಮಗು ಗರ್ಭದಲ್ಲಿ ಬೆಳೆಯುವಾಗ ನೋಡುವ ಮತ್ತು ಕೇಳಿಸಿಕೊಳ್ಳುವ ಜ್ಞಾನಕ್ಕೂ ಮೊದಲು ಸ್ಪರ್ಶಜ್ಞಾನವನ್ನು ಪಡೆಯುತ್ತದೆ. ವಾಸ್ತವವಾಗಿ, ಅವಳಿ ಶಿಶುಗಳು ಎರಡನೇ ತಿಂಗಳಿನಲ್ಲಿ ಆರಂಭದಲ್ಲಿ ನಿಯಮಿತವಾಗಿ ಪರಸ್ಪರ ಸ್ಪರ್ಶಿಸುತ್ತವೆ. ನಂತರ ಶಬ್ದ ಮತ್ತು ದೃಷ್ಟಿಯ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ಮಗು ನಿಮ್ಮ ಹೊಟ್ಟೆಯಲ್ಲಿರುವಾಗ 18 ರಿಂದ 22 ವಾರಗಳಲ್ಲಿ ನಿಮ್ಮ ಹೊಟ್ಟೆಗೆ ಒದೆಯುವುದು, ಓಡಾಡುವುದನ್ನು ನೀವು ಗಮನಿಸಬಹುದು. ಇದು ನಿಮಗೆ ಒಂದು ಹಿತಕರವಾದ ಭಾವನೆಯನ್ನು ಉಂಟುಮಾಡುತ್ತದೆ.
ಗರ್ಭಿಣಿಯರು ತಮ್ಮ ಹೊಟ್ಟೆಯ ಮೇಲೆ ಕೈಯಾಡಿಸಿದಾಗ ಮಗು ಪ್ರತಿಕ್ರಿಯಿಸುತ್ತದೆಯೇ? ಎಂಬ ಬಗ್ಗೆ ಸಂಶೋಧನೆ ಮಾಡಲಾಗಿದ್ದು, ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ತಾಯಂದಿರು ಮಾತನಾಡುವಾಗ, ಹೊಟ್ಟೆಯನ್ನು ತಟ್ಟಿದಾಗ ಹೊಟ್ಟೆಯೊಳಗೆ ಸುಮ್ಮನೆ ಮಲಗಿದ್ದ ಮಗು ಚಲಿಸಲು ಶುರುಮಾಡಿದೆ ಎಂಬುದು ತಿಳಿದುಬಂದಿದೆ. ತಾಯಂದಿರು ಮಾತನಾಡುವುದಕ್ಕಿಂತ ಹೆಚ್ಚಾಗಿ ತಾಯಂದಿರು ತಮ್ಮ ಹೊಟ್ಟೆಯನ್ನು ಮುಟ್ಟಿದಾಗ ಶಿಶುಗಳು ತಮ್ಮ ಕೈಯನ್ನು ಚಲಿಸುವುದು, ತಲೆ ಎತ್ತುವುದು ಮತ್ತು ಬಾಯಿಗಳನ್ನು ತೆರೆಯುವುದು ಕಂಡುಬಂದಿದೆ. ಹಾಗಾಗಿ ಗರ್ಭಧಾರಣೆಯ 21 ಮತ್ತು 25 ವಾರಗಳ ನಡುವೆ, ತಾಯಿಯ ಸ್ಪರ್ಶಕ್ಕೆ ಮಗು ಪ್ರತಿಕ್ರಿಯಿಸುತ್ತದೆ ಎಂಬುದು ತಿಳಿದುಬಂದಿದೆ.
ಹಾಗಾಗಿ ಗರ್ಭಾವಸ್ಥೆಯಲ್ಲಿ ನಿಮ್ಮ ಮಗುವಿನೊಂದಿಗೆ ನಿಮ್ಮ ಬಂಧವನ್ನು ಬಲಗೊಳಿಸಲು ನೀವು ಗರ್ಭಾವಸ್ಥೆಯಲ್ಲಿ ಸಂಗೀತಗಳನ್ನು ಹೆಚ್ಚು ಕೇಳಿ. ನೀವು ಒಂದು ಕಡೆ ಕುಳಿತು ಹೊಟ್ಟೆಯ ಮೇಲೆ ಕೈಯಾಡಿಸಿ ಮಗುವಿನ ಜೊತೆ ಮಾತನಾಡಿ. ಇದು ಮಗುವಿಗೆ ಶಬ್ದ ಜ್ಞಾನ ಪಡೆಯಲು ಸಹಕಾರಿಯಾಗುತ್ತದೆ. ಹಾಗೇ ಉತ್ತಮ ಕಥೆ ಪುಸ್ತಕಗಳನ್ನು ಓದಿ. ಇದರಿಂದ ನಿಮ್ಮ ಮಗು ಉತ್ತಮ ಸಂಸ್ಕಾರಗಳನ್ನು ಹೊಟ್ಟೆಯಲ್ಲಿರುವಾಗಲೇ ಕಲಿಯುತ್ತದೆ. ಅವುಗಳಲ್ಲಿ ಉತ್ತಮ ಭಾವನೆ ಮೂಡುತ್ತದೆ.