
ಮಡಿಕೇರಿ: ಬಾಣಂತಿ ಆರೋಗ್ಯ ವಿಚಾರಿಸಲು ತೆರಳಿದ್ದ ಸಮುದಾಯ ಆರೋಗ್ಯಾಧಿಕಾರಿ ಮೇಲೆ ನಾಯಿ ದಾಳಿ ಮಾಡಿದ ಘಟನೆ ಬೆನ್ನಲ್ಲೇ ಎಚ್ಚೆತ್ತ ಕೊಡಗು ಜಿಲ್ಲಾ ಪೊಲೀಸರು, ಸಾಕು ನಾಯಿ ದಾಳಿ ಮಾಡಿದರೆ ಮಾಲೀಕರಿಗೆ ಜೈಲು ಶಿಕ್ಷೆ ವಿಧಿಸುವ ಕಠಿಣ ಕಾನೂನು ಕ್ರಮ ಜಾರಿಗೆ ತಂದಿದ್ದಾರೆ.
ಮನೆಯಲ್ಲಿರುವ ಸಾಕು ನಾಯಿಗಳನ್ನು ಎಚ್ಚರಿಕೆಯಿಂದ ಸಾಕದೆ ಮನೆಗೆ ಬರುವವರ ಮೇಲೆ ದಾಳಿ ನಡೆಸಿದರೆ ನಾಯಿಯ ಮಾಲೀಕರ ವಿರುದ್ಧ ಸೆಕ್ಷನ್ 289 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು 6 ತಿಂಗಳು ಜೈಲುವಾಸ ಹಾಗೂ ದಂಡವನ್ನು ವಿಧಿಸಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ ಸಾರ್ವಜನಿಕರು ತಮ್ಮ ಮನೆಯ ಸಮೀಪ ನಾಯಿ ದಾಳಿ ಮಾಡಿರುವ ಘಟನೆ ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಇನ್ನು ನಾಪೋಕ್ಲು ಠಾಣಾ ವ್ಯಾಪ್ತಿಯಲ್ಲಿ ಪಾರಾಣೆ ಗ್ರಾಮದ ನಿವಾಸಿ ಬೆಳತಂಡ ಮಾಚಯ್ಯ ಅವರ ಮನೆಗೆ ಮಗುವಿನ ಆರೋಗ್ಯ ತಪಾಸಣೆಗೆ ತೆರಳಿದ್ದ ಸಮುದಾಯ ಆರೋಗ್ಯಾಧಿಕಾರಿ ಕೆ.ಕೆ.ಭವ್ಯ ಅವರ ಮೇಲೆ ಸಾಕುನಾಯಿ ದಾಳಿ ನಡೆಸಿತ್ತು. ಭವ್ಯಾ ಅವರ ದೇಹದ ಹಲವೆಡೆ ನಾಯಿ ಕಚ್ಚಿ ಗಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಾಯಿ ಮಾಲೀಕ ಬೆಳತಂಡ ಮಾಚಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.