ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳದ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸೂರಜ್ ರೇವಣ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಮತ್ತು ಸೆಕ್ಸ್ ವಿಡಿಯೋ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಅವರ ಸಹೋದರ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಪೊಲೀಸ್ ಇಲಾಖೆಗೆ ಯಾವುದೇ ದೂರು ಬಂದಿಲ್ಲ. “ನಾನು ಮಾಧ್ಯಮಗಳ ಮೂಲಕ ಘಟನೆ ಬಗ್ಗೆ ತಿಳಿದುಕೊಂಡೆ” ಎಂದು ಅವರು ಹೇಳಿದರು.
ದೂರುದಾರರೊಬ್ಬರು ಡಿಜಿಪಿಗೆ ಅರ್ಜಿ ಕಳುಹಿಸಿರುವ ಬಗ್ಗೆ ಕೇಳಿದಾಗ, ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಹೇಳಿದರು. “ಅದು ಯಾರೇ ಆಗಿರಲಿ, ಅವರು ತಪ್ಪು ಮಾಡಿದ್ದರೆ, ಅವರಿಗೆ ಶಿಕ್ಷೆಯಾಗಬೇಕು. ಪ್ರಜ್ವಲ್ ರೇವಣ್ಣ ಆಗಿರಲಿ, ಸೂರಜ್ ರೇವಣ್ಣ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದರು.