
ಬೆಂಗಳೂರು: ಬೆಂಗಳೂರಿನ ವಿವಿಧ ಹೋಟೆಲ್, ಉಪಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಸುವಾಗ ಪ್ಲಾಸ್ಟಿಕ್ ಹಾಲೆ, ಕವರ್ ಬಳಸುವುದು ಪತ್ತೆಯಾಗಿದ್ದು, ಇದರಿಂದ ಕ್ಯಾನ್ಸರ್, ಹೃದಯಾಘಾತದಂತಹ ಸಮಸ್ಯೆ ಹೆಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಅಧಿಕಾರಿಗಳು ನಗರದ ವಿವಿಧ ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದಾರೆ.
ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಕವರ್ ಬಳಕೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರಿಂದ ಕ್ಯಾನ್ಸರ್ ನಂತಹ ಮಾರಕ ರೋಗ ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೆಲ ಹೋಟೆಲ್ ಗಳ ಇಡ್ಲಿ ಮಾದರಿ ಪರೀಕ್ಷೆ ಮಾಡಿತ್ತು. ಇವುಗಳಲ್ಲಿ 38 ಮಾದರಿಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದ್ದು, ಇವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬುದು ದೃಢಪಟ್ಟಿದೆ.
ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ಯಾವುದೇ ಹೋಟೆಲ್, ಉಪಹಾರ ದರ್ಶಿನಿಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಹಾಳೆ, ಕವರ್ ಬಳಸುವಂತಿಲ್ಲ ಎಂದು ಸೂಚಿಸಿದ್ದರು. ಆರೋಗ್ಯ ಇಲಾಖೆ ಸೂಚನೆ ಬೆನ್ನಲ್ಲೇ ಬೆಂಗಳೂರಿನ ವಿವಿಧ ಹೋಟೆಲ್, ಉಪಹಾರ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.