ಹಮಾಸ್-ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧದಲ್ಲಿ ಉಗ್ರರನ್ನು ಇಸ್ರೇಲ್ ಮಟ್ಟ ಹಾಕುತ್ತಿದೆ. ಆದರೆ, ಈ ನಡುವೆ 500 ಜನರನ್ನು ಬಲಿ ತೆಗೆದುಕೊಂಡ ಗಾಜಾದ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆದಿತ್ತು. ಇಸ್ರೇಲ್ ಈ ದಾಳಿ ನಡೆಸಿದೆ ಎಂಬ ಮಹತ್ತರವಾದ ಆರೋಪ ಕೇಳಿಬಂದಿತ್ತು. ಆದರೆ, ತಾವು ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ಡ್ರೋನ್ ದೃಶ್ಯಗಳನ್ನು ಬಿಡುಗಡೆ ಮಾಡಿದೆ.
ಗಾಜಾ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿ ಸ್ಫೋಟಿಸಿತು ಎಂಬ ಆರೋಪವನ್ನು ಇಸ್ರೇಲ್ ನಿರಾಕರಿಸಿದೆ. ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಗುಂಪು ಉಡಾವಣೆ ಮಾಡಿದ ರಾಕೆಟ್ ನಿಂದ ಇದು ಸಂಭವಿಸಿದೆ ಎಂದು ಆರೋಪಿಸಿದೆ.
ಅಲ್-ಅಹ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ಮಾಡಿದ್ದರೆ ಅಲ್ಲಿ ರಂದ್ರವುಂಟಾಗುತ್ತಿತ್ತು ಎಂದು ಐಡಿಎಫ್ ಹೇಳಿದೆ. ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟರ್) ವಿಡಿಯೋ ಬಿಡುಗಡೆ ಮಾಡಿದ ಐಡಿಎಫ್, ಸ್ಫೋಟ ಸಂಭವಿಸಿದ ಗಾಜಾ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದ ಚಿತ್ರಗಳನ್ನು ತೋರಿಸಿದೆ. ಇದು ನೂರಾರು ಸಾವು-ನೋವುಗಳಿಗೆ ಕಾರಣವಾಯಿತು. ಸ್ಫೋಟದ ಪರಿಣಾಮವಾಗಿ ಪ್ರದೇಶದಲ್ಲಿ ಆದ ದೃಶ್ಯವನ್ನು ತೋರಿಸಿದೆ. ಆದರೆ, ಯಾವುದೇ ಕುಳಿ ಇರಲಿಲ್ಲ. ತಾವು ನಡೆಸುವ ದಾಳಿಗಳು ಸಾಮಾನ್ಯವಾಗಿ ನೆಲದಲ್ಲಿ ದೊಡ್ಡ ರಂಧ್ರಗಳನ್ನು ಉಂಟುಮಾಡುತ್ತವೆ ಎಂದು ಇಸ್ರೇಲಿ ಸೇನೆ ಹೇಳಿದೆ.
ಇನ್ನು ಐಡಿಎಫ್ ಹಂಚಿಕೊಂಡಿರುವ ಡ್ರೋನ್ ದೃಶ್ಯಗಳು ಹತ್ತಿರದ ಕಟ್ಟಡಗಳ ಮೇಲ್ಛಾವಣಿಯ ಮೇಲೆ ಬಿದ್ದ ಚೂರುಗಳನ್ನು ಸಹ ತೋರಿಸಿದೆ. ಅದು ಕೂಡ ಬಹುಪಾಲು ಹಾಗೇ ಉಳಿದಿದೆ.
ಇಡೀ ಜಗತ್ತಿಗೆ ಈ ಬಗ್ಗೆ ತಿಳಿಯಬೇಕು. ಗಾಜಾದಲ್ಲಿನ ಅನಾಗರಿಕ ಭಯೋತ್ಪಾದಕರು ಗಾಜಾದ ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದು, ಐಡಿಎಫ್ ಅಲ್ಲ ಎಂದು ಎಕ್ಸ್ ನಲ್ಲಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪೋಸ್ಟ್ ಮಾಡಿದ್ದಾರೆ. ನಮ್ಮ ಮಕ್ಕಳನ್ನು ಕ್ರೂರವಾಗಿ ಕೊಂದವರು, ಅವರ ಮಕ್ಕಳನ್ನೂ ಕೊಲ್ಲುತ್ತಾರೆ ಎಂದು ಇಸ್ರೇಲಿ ಪ್ರಧಾನಿ ಹೇಳಿದ್ದಾರೆ.