ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿ ಕೆಲಸದ ಅವಧಿಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಎಲ್ಲಾ ಅಧಿಕಾರಿಗಳು, ನೌಕರರು ಮತ್ತು ಸರ್ಕಾರದ ನಿಗಮ-ಮಂಡಳಿ ನೌಕರರು, ಸಿಬ್ಬಂದಿಗೆ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಲು ಆದೇಶಿಸಲಾಗಿದೆ. ಹೀಗಿದ್ದರೂ ಗುರುತಿನ ಚೀಟಿ ಧರಿಸದ ಕಾರಣ ಸಾರ್ವಜನಿಕರಿಗೆ ನಿರ್ಧಿಷ್ಟ ಅಧಿಕಾರಿಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲಾ ಅಧಿಕಾರಿಗಳು, ನೌಕರರು ಗುರುತಿನ ಚೀಟಿ ಧರಿಸಲು ಸೂಚಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಎಲ್ಲ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎನ್ನಲಾಗಿದೆ.