ನವದೆಹಲಿ: ದೇಶದ ಎಲ್ಲಾ ವಯಸ್ಕರಲ್ಲಿ ಕೊರೋನಾ ನಿರೋಧಕ ಲಸಿಕೆಯಿಂದಾಗಿ ಹೃದಯಘಾತದ ಅಪಾಯ ಹೆಚ್ಚಾಗುತ್ತಿದೆಯೇ ಎಂಬುದರ ಕುರಿತಾಗಿ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ(ICMR) ಮಹತ್ವದ ಅಧ್ಯಯನ ಕೈಗೊಂಡಿದೆ.
ಅಧ್ಯಯನದ ವರದಿ ಇನ್ನೆರಡು ವಾರಗಳಲ್ಲಿ ಪ್ರಕಟವಾಗಲಿದೆ. ಮಂಡಳಿಯ ಪ್ರಧಾನ ನಿರ್ದೇಶಕ ರಾಜೀವ್ ಬಾಹ್ಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಒಟ್ಟು ನಾಲ್ಕು ರೀತಿಯ ಸಾಧ್ಯತೆಗಳ ಬಗ್ಗೆ ಸಂಶೋಧಕರು ತೀವ್ರ ಅಧ್ಯಯನ ಕೈಗೊಂಡಿದ್ದು, ಇನ್ನೆರಡು ವಾರಗಳಲ್ಲಿ ಅಧ್ಯಯನ ವರದಿ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.
ಸಂಶೋಧನೆಯ ಪ್ರಾಥಮಿಕ ಹಂತ ಪೂರ್ಣಗೊಂಡಿದೆ. ಸಂಶೋಧನಾ ವರದಿಗಳನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ಸ್ವೀಕರಿಸಿ ಸಂಶೋಧನಾ ವರದಿ ಆಧರಿಸಿ ಪರಿಶೀಲನೆ ನಡೆಸುತ್ತಿದೆ. ಸಂಶೋಧಕರು ದೇಶದ ಸುಮಾರು 40 ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಕೊರೋನಾ ಸೋಂಕಿತರ ದೇಹದಲ್ಲಿನ ಬದಲಾವಣೆಗಳ ದಾಖಲೆಗಳನ್ನು ಸೂಕ್ಷ್ಮ ಅಧ್ಯಯನಕ್ಕೆ ಒಳಪಡಿಸಿದ್ದಾರೆ.
ದೀರ್ಘಾವಧಿ ಕೊರೋನಾ ಪೀಡಿತರಲ್ಲಿ ಲಸಿಕೆಯಿಂದ ಉಂಟಾಗಿರುವ ಪರಿಣಾಮ, ಯುವ ಸಮುದಾಯದಲ್ಲಿ ಏಕಾಏಕಿ ಹೆಚ್ಚಾಗಿರುವ ಹೃದಯಘಾತ, ಮೆದುಳಿನ ಆಘಾತ, ಹೃದಯ ಸ್ತಂಭನಕ್ಕೆ ದಿಢೀರ್ ತುತ್ತಾದವರ ದೇಹದಲ್ಲಿ ಕಂಡು ಬಂದ ಬದಲಾವಣೆಗಳು, ಹೃದಯಘಾತವಾದರೂ ಬದುಕುಳಿದವರ ದೇಹ ಸ್ಥಿತಿಗಳ ಅಧ್ಯಯನ ನಡೆಸಿ ಒಟ್ಟು ನಾಲ್ಕು ಸಾಧ್ಯತೆಗಳ ಮೇಲೆ ಸಂಶೋಧಕರು ಹೆಚ್ಚು ನಿಗಾವಹಿಸಿದ್ದಾರೆ. ಈ ಸಂಶೋಧನೆಯಲ್ಲಿ ದೆಹಲಿಯ ಏಮ್ಸ್ ತಜ್ಞ ವೈದ್ಯರ ತಂಡ ನಿರತವಾಗಿದ್ದು, ಇನ್ನೆರಡು ವಾರಗಳಲ್ಲಿ ಅಧ್ಯಯನದ ವರದಿ ಪ್ರಕಟವಾಗಲಿದೆ ಎನ್ನಲಾಗಿದೆ.