ನವದೆಹಲಿ: ಕೊರೋನಾ ನಂತರ 18ರಿಂದ 45 ವರ್ಷದವರ ದಿಢೀರ್ ಸಾವು ಸಂಭವಿಸುತ್ತಿರುವ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹತ್ವದ ಅಧ್ಯಯನ ಕೈಗೊಂಡಿದೆ.
ಎರಡು ಹಂತದ ಅಧ್ಯಯನ ಕೈಗೊಂಡಿದ್ದು, ಕೊರೋನಾ ನಂತರದಲ್ಲಿ ಹೆಚ್ಚಾಗಿರುವ ಯುವಜನರ ದಿಢೀರ್ ಸಾವಿನ ಕಾರಣ ಪತ್ತೆ ಮಾಡಲು ಮುಂದಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ -ಐಸಿಎಂಆರ್ ನಿರ್ದೇಶಕ ಡಾ. ರಾಜೀವ್ ಬಹ್ಲ್ ಈ ಕುರಿತು ಮಾಹಿತಿ ನೀಡಿದ್ದಾರೆ.
ದೆಹಲಿಯ ಏಮ್ಸ್ ನಲ್ಲಿ 50ಕ್ಕೂ ಅಧಿಕ ಮರಣೋತ್ತರ ಪರೀಕ್ಷೆ ವರದಿಗಳ ಅಧ್ಯಯನಕ್ಕೆ ಮುಂದಾಗಿದ್ದೇವೆ. 100 ಮರಣೋತ್ತರ ವರದಿಗಳನ್ನು ಸಂಶೋಧನೆಗೆ ಬಳಸಿಕೊಳ್ಳಲಾಗುವುದು. ಕಾರಣವಿಲ್ಲದೆ ಹಠಾತ್ ಸಾವು ಸಂಭವಿಸುತ್ತಿದ್ದು, ಕೋವಿಡ್ ನ ಏಕಾಏಕಿ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಅಧ್ಯಯನದಿಂದ ಸಹಾಯವಾಗಬಹುದು ಎಂದು ತಿಳಿಸಿದ್ದಾರೆ.
ಯಾವುದಾದರೂ ಪರಿಣಾಮ ಇದ್ದಲ್ಲಿ ಸರಿಪಡಿಸಿಕೊಳ್ಳಲು ಅಧ್ಯಯನದಿಂದ ಅನುಕೂಲವಾಗುತ್ತದೆ. ಆರೋಗ್ಯ ಸಮಸ್ಯೆಗಳು ಇಲ್ಲದ ವ್ಯಕ್ತಿಗಳು ದಿಢೀರ್ ಸಾವು ಕಾಣುತ್ತಿದ್ದು, ಇದನ್ನು ಹಠಾತ್ ಸಾವು ಎಂದು ಪರಿಗಣಿಸಿದೆ. ಕೊರೋನಾ ಕೋರೋನಾ ನಂತರ ದಿಢೀರ್ ಸಾವು ತರುವಂತಹ ಬದಲಾವಣೆಗಳು ದೇಹದಲ್ಲಿ ಉಂಟಾಗಿರಬಹುದೇ ಎಂಬುದರ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.