
ಎರಡು ವರ್ಷಗಳ ನಂತರ ಐತಿಹಾಸಿಕ ಅಮರನಾಥ ಯಾತ್ರೆ ಆರಂಭವಾಗಿದೆ. ಅಮರನಾಥ ಗುಹೆಯಲ್ಲಿ ಪ್ರತಿ ವರ್ಷ ಉದ್ಘವವಾಗುವ ಮಂಜಿನ ಶಿವಲಿಂಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ.
ಆದರೆ, ಪ್ರತಿವರ್ಷ ನಿಗದಿತ ಸಮಯದಲ್ಲಿ ಮಾತ್ರ ಮಂಜಿನ ರೂಪದಲ್ಲಿ ಕಾಣಿಸಿಕೊಳ್ಳುವ ಶಿವಲಿಂಗದ ಬಗ್ಗೆ ಅನೇಕ ವಿಜ್ಞಾನಿಗಳಿಗೆ ಸೋಜಿಗ ಉಂಟಾಗಿದೆ. ಇಂತಹದ್ದೇ ಸಮಯದಲ್ಲಿ ಅಮರನಾಥದಲ್ಲಿ ಮಾತ್ರ ಮಂಜಿನಲ್ಲಿ ಶಿವಲಿಂಗ ರೂಪುಗೊಳ್ಳುವುದು ಹೇಗೆ ಎಂಬ ರಹಸ್ಯವನ್ನು ಬೇಧಿಸಲು ಪ್ರಯತ್ನಪಟ್ಟ ಅದೆಷ್ಟೋ ವಿಜ್ಞಾನಿಗಳು ಉತ್ತರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಇದೇ ರೀತಿ ಮಂಜಿನ ರೂಪದಲ್ಲಿ ಶಿವಲಿಂಗ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಶಿವ ದೇವಾಲಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಇಲ್ಲಿ ತ್ರಿಂಬಕೇಶ್ವರ ದೇವಾಲಯದಲ್ಲಿ ಈ ಮಂಜಿನ ಶಿವಲಿಂಗವನ್ನು ಕಂಡ ಭಕ್ತರು ಮತ್ತು ಅರ್ಚಕರು ಪವಾಡ ಎಂದು ಉದ್ಘಾರ ತೆಗೆದಿದ್ದಾರೆ.
ಈ ರೀತಿಯಲ್ಲಿ ಮಂಜಿನ ಶಿವಲಿಂಗ ರೂಪುಗೊಂಡಿದ್ದು ಇದೇ ಮೊದಲು ಎಂದು ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಈ ಮಂಜಿನ ಶಿವಲಿಂಗಕ್ಕೆ ಅರ್ಚಕರು ಪೂಜೆ ಸಲ್ಲಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. ಅರ್ಚಕರು ಈ ಮಂಜಿನ ಶಿವಲಿಂಗದ ಸುತ್ತ ಬಣ್ಣ ಬಣ್ಣದ ಹೂಗಳನ್ನಿಟ್ಟು ಭಕ್ತಿಯಿಂದ ಪೂಜೆ ಮಾಡುತ್ತಿರುವುದನ್ನು ಕಂಡ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರಲ್ಲದೇ, ಇದೊಂದು ಪವಾಡವೇ ಸರಿ ಎಂದಿದ್ದಾರೆ.
ನರೇಂದ್ರ ಅಹೇರ್ ಎಂಬುವರು ಹಂಚಿಕೊಂಡಿರುವ ಈ ವಿಡಿಯೋಗೆ 3200 ವೀಕ್ಷಣೆಯಾಗಿದೆ. ಇದನ್ನು ನೋಡಿದ ಬಹುತೇಕ ನೆಟ್ಟಿಗರು ಭಕ್ತಪರವಶರಾದರೆ, ಇನ್ನೂ ಕೆಲವರು ಶಿವಲಿಂಗದ ಸುತ್ತ ಮನುಷ್ಯರೇ ಮಂಜನ್ನು ಇಟ್ಟು ಅಲಂಕಾರ ಮಾಡಿದ್ದಾರೆ ಎಂದು ರಾಗ ಎಳೆದಿದ್ದಾರೆ.