ಕೊಯಮತ್ತೂರು: ಸಿಹಿ ತಿನಿಸುಗಳಲ್ಲಿ ಆಲ್ಕೋಹಾಲ್ ಸೇರಿಸಿ ಗ್ರಾಹಕರಿಗೆ ನೀಡುತ್ತಿದ್ದ ತಮಿಳುನಾಡಿನ ಐಸ್ ಕ್ರೀಮ್ ಪಾರ್ಲರ್ ಮುಚ್ಚಲಾಗಿದೆ. ತಿನಿಸು ತಯಾರಿಸುವಲ್ಲಿ ಗಂಭೀರ ಲೋಪ ಎಸಗಿದ್ದಕ್ಕಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಗುರುವಾರ ಉಪಾಹಾರ ಗೃಹವನ್ನು ಮುಚ್ಚಿದ್ದಾರೆ.
ಪಿಎನ್ ಪಾಳ್ಯಂ ಅವಿನಾಶಿ ರಸ್ತೆಯ ರೋಲಿಂಗ್ ಡಫ್ ಕೆಫೆ ಎಂಬ ಹೆಸರಿನ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಕೆಫೆಯು ಆಹಾರ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಿರಲಿಲ್ಲ
ಆಹಾರ ಸುರಕ್ಷತಾ ನಿಯಮಗಳ ಪ್ರಕಾರ, ಅನುಮತಿಸಲಾಗದ ಎರಡು ಸಿಹಿತಿಂಡಿಗಳಲ್ಲಿ ಆಲ್ಕೋಹಾಲ್ ಮಿಶ್ರಣ ಮಾಡಿರುವುದಾಗಿ ಕೆಫೆಯ ಸಿಬ್ಬಂದಿ ಹೇಳಿದ್ದಾರೆ. ಕ್ಯಾರಮೆಲ್ ಕಸ್ಟರ್ಡ್ ಮತ್ತು ಡಾರ್ಕ್ ಚಾಕೊಲೇಟ್ ಎಂಬ ಎರಡು ಸಿಹಿತಿಂಡಿಗಳಲ್ಲಿ ಮಿಶ್ರಣ ಮಾಡಲಾಗಿತ್ತು ಎಂದು ಎಫ್‌ಎಸ್‌ಎಸ್‌ಎಐ ಜಿಲ್ಲಾ ನಿಯೋಜಿತ ಅಧಿಕಾರಿ ಡಾ.ಕೆ. ತಮಿಳು ಸೆಲ್ವನ್ ತಿಳಿಸಿದ್ದಾರೆ.
ಕೆಫೆಯಲ್ಲಿ ಅರ್ಧ ಬಳಸಿದ ವಿಸ್ಕಿ ಮತ್ತು ಬ್ರಾಂಡಿ ಬಾಟಲಿಗಳು ಪತ್ತೆಯಾಗಿವೆ. ಸಿಹಿತಿಂಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಡುಗೆ ಕೋಣೆಯನ್ನು ನೈರ್ಮಲ್ಯದ ರೀತಿಯಲ್ಲಿ ನಿರ್ವಹಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾರ್ಲರ್ ನಲ್ಲೂ ನೊಣಗಳು ಕಂಡುಬಂದಿದ್ದು, ಸ್ವಚ್ಛತೆ ನಿರ್ವಹಣೆ ಸರಿಯಾಗಿಲ್ಲ. ಆಹಾರವನ್ನು ತಯಾರಿಸುವವರು ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರಗಳನ್ನು ಹೊಂದಿಲ್ಲ ಎಂದು ತಪಾಸಣೆಯಲ್ಲಿ ತಿಳಿದುಬಂದಿದೆ.
ಸಿಬ್ಬಂದಿ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಿರಲಿಲ್ಲ. ಪ್ರಮಾಣಪತ್ರವನ್ನು ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಲಾಗಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಕೆಫೆಯನ್ನು ಮುಚ್ಚಿದ್ದಾರೆ.