ಭಾರತ-ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಉತ್ಸುಕರಾಗಿರುವ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದಿದೆ. ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿದೆ.
ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಯುಎಇಯಲ್ಲಿ ಟಿ 20 ವಿಶ್ವಕಪ್ ನಡೆಯಲಿದೆ. ಐಸಿಸಿ ಎರಡು ಗುಂಪನ್ನು ಪ್ರಕಟಿಸಿದೆ. ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಗುಂಪಿನಲ್ಲಿ ತಂಡದ ಆಯ್ಕೆಯನ್ನು 2021 ಮಾರ್ಚ್ ವರೆಗಿನ ರೇಟಿಂಗ್ ಆಧಾರದ ಮೇಲೆ ನಿರ್ಧರಿಸಲಾಗಿದೆ. ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಜೊತೆ ಗ್ರೂಪ್ ಒಂದರಲ್ಲಿದೆ.
ಗ್ರೂಪ್ -2ರಲ್ಲಿ ಭಾರತ, ಪಾಕಿಸ್ತಾನದ ಹೊರತಾಗಿ ನ್ಯೂಜಿಲ್ಯಾಂಡ್ ಹಾಗೂ ಅಪಘಾನಿಸ್ತಾನವಿದೆ. 2019, ಜೂನ್ 16ರಂದು ಐಸಿಸಿ ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನದ ಮಧ್ಯೆ ಕೊನೆ ಪಂದ್ಯ ನಡೆದಿತ್ತು. ಡಕ್ವರ್ತ್ ಲೂಯಿಸ್ ನಿಯಮದಡಿ, ಭಾರತ ಪಾಕಿಸ್ತಾನವನ್ನು 89 ರನ್‌ಗಳಿಂದ ಸೋಲಿಸಿತ್ತು.
ಐಸಿಸಿ ವಿಶ್ವಕಪ್ ಗೆ ಗುಂಪು ಘೋಷಣೆಯಾಗಿರುವುದು ಖುಷಿ ನೀಡಿದೆ. ಕೆಲ ಅತ್ಯುತ್ತಮ ಪಂದ್ಯ ವೀಕ್ಷಣೆಗೆ ಅವಕಾಶ ಸಿಗಲಿದೆ ಎಂದು ಐಸಿಸಿ ಅಧ್ಯಕ್ಷರು ಹೇಳಿದ್ದಾರೆ.