
ಬೆಂಗಳೂರು: ಅಕ್ರಮ ನಡೆದ ಸಂದರ್ಭದಲ್ಲಿ ಕೇವಲ ಅಧಿಕಾರಿಗಳ ಪಾತ್ರ ಇರದೆ ರಾಜಕಾರಣಿಗಳ ಒತ್ತಡ ಮತ್ತು ಕೈವಾಡ ಕೂಡ ಇರುತ್ತದೆ. ಆದರೆ, ಒಳ್ಳೆಯವರೆಂದು ಬಿಂಬಿಸಿಕೊಳ್ಳಲು ರಾಜಕಾರಣಿಗಳು ಅಧಿಕಾರಿಗಳನ್ನೇ ಬಲಿಪಶು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ಐಎಎಸ್, ಐಪಿಎಸ್ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಮತ್ತು 5 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಡಿ ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ್ ಅವರ ಬಂಧನವಾಗಿದ್ದು ಸರ್ಕಾರದ ವಿರುದ್ಧ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ತಿರುಗಿಬಿದ್ದಿದ್ದಾರೆ. ಈ ಕುರಿತಾಗಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲು ಮಂಗಳವಾರ ರಾತ್ರಿ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ಸಭೆ ಸೇರಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ರಾಜಕಾರಣಿಗಳ ಒತ್ತಡಕ್ಕೆ ತಕ್ಕಂತೆ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಯಾವುದೇ ವಿಭಾಗದಲ್ಲಿ ಅಕ್ರಮ ನಡೆದ ಸಂದರ್ಭದಲ್ಲಿ ರಾಜಕಾರಣಿಗಳು ಒತ್ತಡ ಇರುತ್ತದೆ. ಆದರೆ, ಅಧಿಕಾರಿಗಳನ್ನೇ ಬಲಿಪಶು ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಧಾನಿಯವರಿಗೆ ಪತ್ರ ಬರೆಯಲು ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.