ಪುನೀತ್ ರಾಜಕುಮಾರ್ ವಿಧಿವಶರಾದಾಗ ಅವರು ಗಳಿಸಿದ್ದು ಏನು ಅಂತ ಇಡೀ ಜಗತ್ತು ನೋಡಿ ನಿಬ್ಬೆರಗಾಗಿತ್ತು. ಅಷ್ಟೆ ಅಲ್ಲ ಅದು ಎಲ್ಲರಿಗೂ ಪಾಠವೂ ಆಗಿತ್ತು. ಮನುಷ್ಯ ಬದುಕಿದ್ದಾಗ ಎಷ್ಟು ಆಸ್ತಿ ಅಂತಸ್ತು ಗಳಿಸುತ್ತಾನೆ ಅನ್ನೋದು ಮುಖ್ಯವಲ್ಲ ಆತ ಎಷ್ಟು ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾನೆ ಅನ್ನೋದು ಇದರಿಂದ ಅರಿವಾಗಿತ್ತು. ಇತ್ತೀಚೆಗೆ ಐಎಎಸ್ ಅಧಿಕಾರಿ ಕೃಷ್ಣತೇಜ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೋ ನೋಡಿದ್ರೆ, ಅವರು ಕೂಡಾ ಅದೇ ಸಂದೇಶ ಕೊಡುವ ಹಾಗಿದೆ.
ಐಎಎಸ್ ಅಧಿಕಾರಿ ಕೃಷ್ಣ ತೇಜ ಇತ್ತೀಚೆಗೆ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೋ ಒಂದು ಎಲ್ಲರ ಮನಸ್ಸನ್ನ ಗೆದ್ದಿದೆ. ಈ ಫೋಟೋದಲ್ಲಿ ಓರ್ವ ವೃದ್ಧ ಮಹಿಳೆ ಐಎಎಸ್ ಅಧಿಕಾರಿಯಾಗಿರುವ ಕೃಷ್ಣ ತೇಜ ಅವರ ತಲೆಯ ಮೇಲೆ ಕೈ ಇಟ್ಟು ಪ್ರೀತಿಯಿಂದ ಆಶೀರ್ವಾದ ಮಾಡುವುದನ್ನ ಗಮನಿಸಬಹುದು. ಕೃಷ್ಣ ತೇಜ ಅವರು ಕೂಡಾ ಆ ಹಿರಿಯ ಮಹಿಳೆಯ ಆಶೀರ್ವಾದವನ್ನ ಪುಟ್ಟ ಮಗುವಿನಂತೆ ತಲೆಬಾಗಿ ಸ್ವೀಕರಿಸುವುದನ್ನ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಈ ಟ್ವಿಟ್ಟರ್ ಪೋಸ್ಟ್ ಶೀರ್ಷಿಕೆಯಲ್ಲಿ “ಇದಕ್ಕಿಂತ ಹೆಚ್ಚಿನದ್ದು ಇನ್ನೇನು ಬೇಕು“ ಅಂತ ಕೃಷ್ಣತೇಜ ಅವರು ಬರೆದುಕೊಂಡಿದ್ದಾರೆ.
ಐಎಎಸ್ ಅಧಿಕಾರಿ ಅಂದ ಮೇಲೆ ಅವರಿಗೆ ಇರುವ ಜವಾಬ್ದಾರಿ ಒತ್ತಡಗಳು ಒಂದೆರಡಲ್ಲ. ಅದರ ನಡುವೆ ಜನರ ಸಮಸ್ಯೆಯನ್ನ ಕೂಡಾ ಆಲಿಸುತ್ತಿರಬೇಕು. ಎಷ್ಟೋ ಬಾರಿ ತಮ್ಮವರಿಗಂತಾನೇ ಸಮಯ ಅವರ ಬಳಿ ಇರುವುದಿಲ್ಲ. ಆದರೆ ಈ ರೀತಿಯ ಚಿಕ್ಕ-ಪುಟ್ಟ ಘಟನೆಗಳೇ ಅವರಿಗೆ ಹುರಿದುಂಬಿಸುತ್ತೆ. ಈ ಫೋಟೋ ನೋಡ್ತಿದ್ರೆ ಗೊತ್ತಾಗುತ್ತೆ ಮಹಿಳೆ, ಹೃದಯಪೂರ್ವಕವಾಗಿ ಆಶೀರ್ವಾದ ಮಾಡುತ್ತಿದ್ದಾಳೆ ಅಂತ. ಜೊತೆಗೆ ಕೃಷ್ಣತೇಜ ಅವರ ನಗುವಿನಿಂದಲೇ ಗೊತ್ತಾಗುತ್ತಿದೆ ಅವರು ಎಷ್ಟು ಖುಷಿಯಾಗಿದ್ದಾರೆ ಅಂತ. ಅಲ್ಲೇ ಇರುವ ಇನ್ನೊರ್ವ ವ್ಯಕ್ತಿಯ ನಗು ಈ ದೃಶ್ಯಕ್ಕೆ ಸಾಕ್ಷಿಯಾಗಿದೆ.
ಈ ಫೋಟೋವನ್ನ ಈಗಾಗಲೇ ಸಾವಿರಕ್ಕೂ ಅಧಿಕ ಶೇರ್ ಆಗಿದ್ದು 13 ಸಾವಿರಕ್ಕೂ ಜನರು ವೀಕ್ಷಿಸಿದ್ದಾರೆ, ಲೈಕ್ ಮಾಡಿದ್ದಾರೆ. ಅನೇಕರು ಕಾಮೆಂಟ್ ಮಾಡಿ ತಮ್ಮ ಭಾವನೆಯನ್ನ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಒಬ್ಬರು ‘ಇದೊಂದು ಅಪರೂಪದ ದೃಶ್ಯ, ಈ ರೀತಿಯ ನಿಷ್ಕಲ್ಮಶ ಹೃದಯದ ಆಶೀರ್ವಾದ ಪಡೆಯುವುದಕ್ಕೆ ನೀವು ಪುಣ್ಯ ಮಾಡಿದ್ದಿರಾ ಎಂದು ಕಾಮೆಂಟ್ ಮಾಡಿದ್ದಾರೆ.