
ಮುಂಬೈನ ಮಲಾಡ್‌ನಲ್ಲಿರುವ ಪಾವ್ ಭಾಜಿ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವನ್ನು ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ದುರದೃಷ್ಟಕರ ಅಪಘಾತದಲ್ಲಿ ಕೈ ಕಳೆದುಕೊಂಡ ನಂತರವೂ ಬೀದಿ ಬದಿ ವ್ಯಾಪಾರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಈ ಮೂಲಕ ನ್ಯೂನತೆ ಎಂದಿಗೂ ತನ್ನ ಕೆಲಸಕ್ಕೆ ಅಡ್ಡಿ ಬಂದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಿತೇಶ್ ಗುಪ್ತಾ ಎಂಬ ವ್ಯಕ್ತಿ ಒಂದೇ ಕೈಯಿಂದ ಭಾಜಿ ಮಾಡುವುದು ಮತ್ತು ತರಕಾರಿ ಕತ್ತರಿಸುವುದನ್ನು ಕಾಣಬಹುದು. ತನ್ನ ತೋಳಿನ ಕೆಳಗೆ ಚಾಕುವನ್ನು ಭದ್ರಪಡಿಸಿದ್ದು, ತರಕಾರಿಗಳನ್ನು ತನ್ನ ಇನ್ನೊಂದು ಕೈಯಲ್ಲಿ ಹಿಡಿದುಕೊಂಡು ಕತ್ತರಿಸಿದ್ದಾರೆ. ಮಿತೇಶ್ ಅವರ ಸಮರ್ಪಣೆ ಮತ್ತು ಪರಿಶ್ರಮವು ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತದೆ. ಇದು ಜೀವನದಲ್ಲಿ ಯಾವಾಗಲೂ ಮುಂದುವರಿಯಲು ನಿಮ್ಮನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ರೆ ತಪ್ಪಿಲ್ಲ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ವಿಡಿಯೋ 30,000ಕ್ಕಿಂತ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿದೆ. ಕಠಿಣ ಪರಿಶ್ರಮ ಪಡುತ್ತಿರುವ ವ್ಯಕ್ತಿಯು ತನ್ನ ಕೆಲಸದ ಕಡೆಗೆ ತೋರುತ್ತಿರುವ ಸಮರ್ಪಣೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಹಲವಾರು ಮಂದಿ ಬಳಕೆದಾರರು ಮಿತೇಶ್ ಅವರಿಗೆ ಸೆಲ್ಯೂಟ್ ಎಂದಿದ್ದಾರೆ. ಇದು ನಿಜವಾಗಿಯೂ ಬಹಳ ಸ್ಪೂರ್ತಿದಾಯಕ ಕಥೆ ಎಂದು ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ.