
ಯಾವುದೇ ಅಡುಗೆ ಇರಲಿ, ಅದರಲ್ಲಿ ಸ್ವಲ್ಪ ತೆಂಗಿನಕಾಯಿ ಹಾಕಿದ್ರೆ ಸಾಕು ಅಡುಗೆ ರುಚಿ ದುಪ್ಪಟ್ಟಾಗಿರುತ್ತೆ. ಭಾರತದಲ್ಲಿ ಎಷ್ಟೋ ಮನೆಗಳಲ್ಲಿ ತೆಂಗಿನಕಾಯಿ ಇಲ್ಲದೇ ಅಡುಗೆ ಮಾಡೋದೇ ಇಲ್ಲ. ಆದ್ರೆ, ತೆಂಗಿನಕಾಯಿ ಚಿಪ್ಪಿನಿಂದ ಕೊಬ್ಬರಿ ತೆಗೆಯೋದಿದೆಯಲ್ಲ. ಅದೇ ದೊಡ್ಡ ಸವಾಲಾಗಿರುತ್ತೆ.
ಆದರೆ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು, ಇದೇ ಸವಾಲಿಗೆ ಸುಲಭವಾದ ಪರಿಹಾರ ಒಂದನ್ನ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮತ್ತು ಶೀರ್ಷಿಕೆಯಲ್ಲಿ ಇದು ಪ್ರತಿಯೊಬ್ಬ ತೆಂಗಿನಕಾಯಿ ಪ್ರಿಯ ಇಷ್ಟ ಪಡುವ ವಿಡಿಯೋ ಎಂದು ಬರೆದುಕೊಂಡಿದ್ದಾರೆ.
ಆ ವಿಧಾನ ಹೇಗಿದೆಯೆಂದರೆ, ಮೊದಲು ತೆಂಗಿನಕಾಯಿಯನ್ನ ಎರಡು ಭಾಗವಾಗಿ ಒಡೆಯಬೇಕು. ಆ ನಂತರ ಒಂದೊಂದೇ ಭಾಗವನ್ನ ಗ್ಯಾಸ್ ಸ್ಟೌವ್ ಬೆಂಕಿಯಲ್ಲಿ ಇಟ್ಟು ಬಿಸಿ ಮಾಡಬೇಕು. ಆಗ ಆ ಶಾಖದಿಂದ ಅದರೊಳಗೆ ಎಣ್ಣೆ ಅಂಶ ಬಿಡುಗಡೆಯಾಗುತ್ತೆ. ಆ ನಂತರ ಆ ಬಿಸಿ ತೆಂಗಿನಕಾಯಿಯನ್ನು ಕೆಲ ಸಮಯದವರೆಗೆ ನೀರಿನಲ್ಲಿ ಇಡಬೇಕು. ಈ ರೀತಿ ಮಾಡಿದ ನಂತರ ಕೆಲವೇ ಕೆಲ ನಿಮಿಷಗಳಲ್ಲಿ ಕೊಬ್ಬರಿ ಮತ್ತು ತೆಂಗಿನ ಕಾಯಿ ಚಿಪ್ಪು ಸುಲಭವಾಗಿ ಬೇರೆ-ಬೇರೆಯಾಗಿರುತ್ತೆ.
ಈಗ ತೆಂಗಿನಕಾಯಿ ಕೊಬ್ಬರಿ ಬೇರೆ ಮಾಡುವ ವೀಡಿಯೊವನ್ನು ಇಲ್ಲಿಯವರೆಗೆ 16 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದೊಂದು ಉತ್ತಮ ವಿಧಾನವಾಗಿದ್ದು ನೆಟ್ಟಿಗರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.