ಜೀವನದಲ್ಲಿ ದಿಢೀರ್ ಮೇಲೇರುವ ಆಸೆ ಹಲವರಿಗೆ. ಇದಕ್ಕಾಗಿ ಸುಲಭದ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಅನೇಕ ಮಂದಿಗೆ ದಿಢೀರ್ ಶ್ರೀಮಂತರಾಗುವ ಆಸೆ. ಅದಕ್ಕಾಗಿಯೇ ಇಲ್ಲಸಲ್ಲದ್ದನ್ನು ಮಾಡಿ ಕೊನೆಗೆ ಅನ್ಯಾಯವಾಗಿ ಮೋಸಕ್ಕೆ ಒಳಗಾಗುವುದೋ ಇಲ್ಲವೇ ಕೆಟ್ಟಹಾದಿ ಹಿಡಿಯುವುದನ್ನು ಮಾಡುತ್ತಾರೆ. ಆದರೆ ಉತ್ತಮ ಮಾರ್ಗದಲ್ಲಿ ನಡೆದು ಉನ್ನತ ಸ್ಥಾನಕ್ಕೆ ಏರಿದ ಇಲ್ಲವೇ ಸಿರಿವಂತರಾದವರನ್ನು ವಿಚಾರಿಸಿದರೆ ಅವರು ಕಡುಬಡತನದಿಂದ ಹಂತಹಂತವಾಗಿ ಹೇಗೆ ಮೇಲೇರಿರುವ ಬಗ್ಗೆ ಉಲ್ಲೇಖಿಸುತ್ತಾರೆ.
ಇದರ ಕುರಿತು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಎರಡು ಏಣಿಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುಂದರವಾಗಿ ವಿವರಿಸಿದ್ದಾರೆ. ಸರಿಯಾದ ದಿನಚರಿಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ತನ್ನನ್ನು ತಾನು ಆರೋಗ್ಯವಾಗಿರಿಸಿಕೊಳ್ಳುವ ಮೂಲಕ ಹೇಗೆ ಮೇಲೇರಬಹುದು ಎಂಬುದನ್ನು ಅವರು ವಿವರಿಸಿದ್ದಾರೆ.
ಟ್ವಿಟರ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಇಬ್ಬರು ಜನರು ಏಣಿಯನ್ನು ಏರಲು ಪ್ರಯತ್ನಿಸುತ್ತಿರುವ ನೋಡಬಹುದು. ಒಬ್ಬ ವ್ಯಕ್ತಿಯು ಮೆಟ್ಟಿಲುಗಳು ಸಾಕಷ್ಟು ದೂರವಿರುವ ಏಣಿಯನ್ನು ಹತ್ತಲು ಪ್ರಯತ್ನಿಸಿದರೆ, ಇನ್ನೊಬ್ಬ ವ್ಯಕ್ತಿಯು ಹತ್ತಿರದ ಹೆಜ್ಜೆಗಳೊಂದಿಗೆ ‘ಸ್ಥಿರವಾದ’ ಏಣಿಯನ್ನು ಏರುತ್ತಿದ್ದಾನೆ. ಹಂತಹಂತವಾಗಿ ಹೆಜ್ಜೆಯನ್ನಿಟ್ಟರೆ ಸುಲಭದಲ್ಲಿ ಮೇಲೇರರಬಹುದು, ಅದನ್ನು ಬಿಟ್ಟು ಒಂದೇ ಬಾರಿ ದೊಡ್ಡ ದೊಡ್ಡ ಯೋಚನೆ ಮಾಡಿದರೆ ಅದು ಸಾಧ್ಯವಿಲ್ಲ ಎನ್ನುವ ಸಂದೇಶ ಈ ಫೋಟೋ ನೀಡುತ್ತಿದ್ದು, ಅಸಂಖ್ಯ ಶ್ಲಾಘನೆ ವ್ಯಕ್ತವಾಗಿದೆ.