ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಜಟಾಪಟಿ ಮುಂದುವರೆದಿದೆ.
7ನೇ ಎಸಿಎಂಎಂ ಕೋರ್ಟ್ ನಲ್ಲಿ ರೋಹಿಣಿ ಸಿಂಧೂರಿ ಅವರ ವಿರುದ್ಧ ರೂಪಾ ಮೌದ್ಗಿಲ್ ಮಾನವನಷ್ಟ ಮೊಕದ್ದಮೆ ಹೂಡಿದ್ದಾರೆ. 2023ರ ಫೆಬ್ರವರಿ 19ರಂದು ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ನೀಡಿದ್ದು, ಅದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ನನ್ನ ಮೇಲೆ ಅವಹೇಳನಕಾರಿ ಆರೋಪ ಮಾಡಿದ್ದಾಗಿ ರೂಪಾ ತಿಳಿಸಿದ್ದಾರೆ.
ರೋಹಿಣಿ ಸಿಂಧೂರಿ ಹೇಳಿಕೆಯನ್ನು 1.8 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಅವಹೇಳನಕಾರಿ ಹೇಳಿಕೆಯ ನಂತರ ತಮ್ಮ ವರ್ಗಾವಣೆಯಾಗಿದ್ದು, ಆರು ತಿಂಗಳವರೆಗೆ ವೇತನ ನೀಡದೆ, ಹುದ್ದೆ ಇಲ್ಲದೆ ವರ್ಗಾಯಿಸಲಾಗಿತ್ತು. ರೋಹಿಣಿ ಸಿಂಧೂರಿ ಹೇಳಿಕೆಯಿಂದ ತಂಗಿ, ಪತಿ ಮತ್ತು ಮಕ್ಕಳಿಗೆ ಮಾನಸಿಕ ಹಿಂಸೆಯಾಗಿದೆ. ಹೀಗಾಗಿ ಮಾನನಷ್ಟ ಪ್ರಕರಣ ದಾಖಲಿಸಲು ರೂಪಾ ಕೋರಿದ್ದಾರೆ. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ 7ನೇ ಎಸಿಎಂಎಂ ಕೋರ್ಟ್ ನಿಂದ ರೋಹಿಣಿ ಸಿಂಧೂರಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.