ಭಾರತೀಯ ವಾಯುಸೇನೆಯಲ್ಲಿನ C-17 ಗ್ಲೋಬ್‌ಮಾಸ್ಟರ್‌ನ ಏಕೈಕ ಮಹಿಳಾ ಪೈಲಟ್ ಲೆಫ್ಟಿನೆಂಟ್ ಹರ್ ರಾಜ್ ಕೌರ್ ಬೋಪರಾಯ್ ಅವರು ಸೂಡಾನ್ ನಿಂದ ಭಾರತೀಯರನ್ನು ತಾಯ್ನಾಡಿಗೆ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹೆವಿ-ಲಿಫ್ಟ್ ಸಾರಿಗೆ ವಿಮಾನ C-17 ಗ್ಲೋಬ್‌ಮಾಸ್ಟರ್‌ನ ಮೊದಲ ಮತ್ತು ಏಕೈಕ ಮಹಿಳಾ ಪೈಲಟ್ ಅವರಾಗಿದ್ದು ಆಂತರಿಕ ಯುದ್ಧ ನಡೆಯುತ್ತಿರುವ ಸುಡಾನ್‌ನಿಂದ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಭಾರತದ ಕಾರ್ಯಾಚರಣೆಯಾದ ‘ಆಪರೇಷನ್ ಕಾವೇರಿ’ಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಹರ್ ರಾಜ್ ಕೌರ್ ಬೋಪರಾಯ್ ಅವರು ಮಹಿಳೆಯರನ್ನು ಜೆಡ್ಡಾದಲ್ಲಿ ವಿಮಾನಕ್ಕೆ ಹತ್ತಿಸುತ್ತಿರುವ ಫೋಟೋಗಳು ಭಾರೀ ವೈರಲ್ ಆಗಿವೆ. C-17 ಗ್ಲೋಬ್‌ಮಾಸ್ಟರ್ ಭಾರತೀಯ ವಾಯುಪಡೆಯ ಅತಿದೊಡ್ಡ ವಿಮಾನವಾಗಿದೆ.
” ಲೆಫ್ಟಿನೆಂಟ್ ಹರ್ ರಾಜ್ ಕೌರ್ ಬೋಪರಾಯ್ ಅವರು C-17 ಪೈಲಟ್ ಆಗಿದ್ದಾರೆ. ಅವರು ಆಪರೇಷನ್ ಕಾವೇರಿಯಲ್ಲಿ ಭಾಗವಹಿಸಿದ್ದರು. ದೈತ್ಯ ವಿಮಾನವನ್ನು ಗಾಜಿಯಾಬಾದ್‌ನ ಹಿಂಡನ್ ಏರ್ ಬೇಸ್‌ನಿಂದ ಜೆಡ್ಡಾಕ್ಕೆ ಹಾರಿಸಲಾಯಿತು ಮತ್ತು ಜೆಡ್ಡಾದಿಂದ ಸ್ಥಳಾಂತರಿಸಲ್ಪಟ್ಟವರನ್ನು ಹೊತ್ತು ಮುಂಬೈಗೆ ಹಾರಿತು” ಎಂದು ಅಧಿಕೃತ ಮೂಲಗಳು ತಿಳಿಸಿವೆ.
246 ಭಾರತೀಯರನ್ನು ಹೊತ್ತ ವಿಮಾನವು ಗುರುವಾರ ಮುಂಬೈಗೆ ಬಂದಿಳಿಯಿತು. ಇಲ್ಲಿಯವರೆಗೆ ಸುಡಾನ್‌ನಿಂದ ಒಟ್ಟು 606 ಭಾರತೀಯರನ್ನು ಕರೆತರಲಾಗಿದೆ.