ತರಬೇತಿ ವೇಳೆ ಭಾರತೀಯ ವಾಯುಪಡೆಯ (ಐಎಎಫ್) ಅಪಾಚೆ ಹೆಲಿಕಾಪ್ಟರ್ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಐಎಎಫ್ ಅಧಿಕೃತ ಹೇಳಿಕೆಯ ಪ್ರಕಾರ ಎಲ್ಲಾ ಸಿಬ್ಬಂದಿ ಮತ್ತು ವಿಮಾನವು ಸುರಕ್ಷಿತವಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ತುರ್ತು ಭೂಸ್ಪರ್ಶಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದಾಗ್ಯೂ ಮೂಲಗಳ ಪ್ರಕಾರ ಕೆಲವು ತಾಂತ್ರಿಕ ಸಮಸ್ಯೆಗಳ ಕಾರಣ ಮುನ್ನೆಚ್ಚರಿಕೆಯಾಗಿ ಪೈಲಟ್ ಸುರಕ್ಷಿತವಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಜಿಲ್ಲಾಡಳಿತ ಕೂಡ ಲ್ಯಾಂಡಿಂಗ್ ಸ್ಥಳದಲ್ಲಿದ್ದು, ಭದ್ರತಾ ಉದ್ದೇಶಕ್ಕಾಗಿ ಪ್ರದೇಶವನ್ನ ಸುತ್ತುವರಿಯಲಾಗಿದೆ. ಈ ಬೆಳವಣಿಗೆಯಿಂದ ಗ್ರಾಮದ ನಿವಾಸಿಗಳು ಬೆಚ್ಚಿಬಿದ್ದಿದ್ದು, ಇದರ ಮಧ್ಯೆಯೂ ಕೆಲವರು ಚಾಪರ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.
AH-64E ಅಪಾಚೆ ಪ್ರಪಂಚದ ಅತ್ಯಂತ ಸುಧಾರಿತ ಬಹು-ಪಾತ್ರ ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ . ಭಾರತೀಯ ವಾಯುಪಡೆಗೆ AH-64E ಅಪಾಚೆ ಜುಲೈ 2018 ರಲ್ಲಿ ಯಶಸ್ವಿ ಮೊದಲ ಹಾರಾಟಗಳನ್ನು ಪೂರ್ಣಗೊಳಿಸಿತು. ಭಾರತೀಯ ವಾಯುಪಡೆ ಸಿಬ್ಬಂದಿಯ ಮೊದಲ ಬ್ಯಾಚ್ 2018 ರಲ್ಲಿ ಅಮೆರಿಕಾದಲ್ಲಿ ಅಪಾಚೆ ಹಾರಾಟವನ್ನು ಪ್ರಾರಂಭಿಸಿತು.