ರಾಜ್ಯ ರಾಜಕಾರಣದಲ್ಲಿ ಪ್ರಸ್ತುತ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತರೂಢ ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತಕ್ಕೆ ಚಾಲನೆ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದಕ್ಕೆ ಪುಷ್ಟಿ ನೀಡುವಂತೆ ಸೋಮವಾರದಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪೂರಕವಾಗಿ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಬಿಜೆಪಿಯ ಇನ್ನೂ ಕೆಲ ಶಾಸಕ, ಸಂಸದರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದ್ದು, ಈ ವದಂತಿ ಕುರಿತಂತೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಸಂಸದ ಸಂಗಣ್ಣ ಕರಡಿ, ತಾವು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಇದನ್ನು ರಕ್ತದಲ್ಲಿ ಬೇಕಾದರೆ ಬರೆದು ಕೊಡುತ್ತೇನೆ ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಮತ್ತೊಮ್ಮೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದೊಮ್ಮೆ ಟಿಕೆಟ್ ನೀಡದಿದ್ದರೂ ಸಹ ಪಕ್ಷ ಸೂಚಿಸಿದವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರಲ್ಲದೆ, ನಾನು ಬಿಜೆಪಿ ಬಿಡುತ್ತೇನೆ ಎಂಬುದು ಕೇವಲ ಊಹಾಪೋಹ, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.