ಉತ್ತರ ಪ್ರದೇಶದಲ್ಲಿ ಆಡಳಿತರೂಢ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಸರ್ಕಾರಕ್ಕಿಂತ ಪಕ್ಷ ಸಂಘಟನೆಯೇ ಮುಖ್ಯ, ಕಾರ್ಯಕರ್ತರ ನೋವಿನ ಜೊತೆ ನಾನಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸೆಡ್ಡು ಹೊಡೆದಿದ್ದರು.
ಇದಾದ ಬಳಿಕ ಶಾಸಕರುಗಳು ಸಹ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದು, ನಾವು ಫೋನ್ ಕರೆ ಮಾಡಿದರೆ ಅಧಿಕಾರಿಗಳು ಇರಲಿ, ಅವರ ಕಚೇರಿಯ ಕಿರಿಯ ಅಧಿಕಾರಿಗಳು ಸಹ ಸ್ಪಂದಿಸುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದರ ಮಧ್ಯೆ ಇದೀಗ ಬರೇಲಿಯ ಬಿಜೆಪಿ ನಾಯಕರೊಬ್ಬರು ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದರೆ ಇಸ್ಲಾಂ ಗೆ ಮತಾಂತರಗೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಬರೇಲಿ ಮೆಟ್ರೋ ಪಾಲಿಟನ್ ಬಿಜೆಪಿ ಉಪಾಧ್ಯಕ್ಷ ಪ್ರದೀಪ ಅಗರ್ವಾಲ್ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ತಮ್ಮ ಈ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮನ್ನು ಕಡೆಗಣಿಸಿದರೆ ಇಸ್ಲಾಂ ಗೆ ಮತಾಂತರಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಪ್ರದೀಪ್ ಅವರ ವಿರುದ್ಧ ಹಲವಾರು ಕೇಸುಗಳು ದಾಖಲಾಗಿದ್ದು, ಇದಕ್ಕೆ ಪಕ್ಷದ ನಾಯಕರು ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಈ ರೀತಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪ್ರದೀಪ್ ಅಗರ್ವಾಲ್ ಅವರ ಫೇಸ್ ಬುಕ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಉತ್ತರ ಪ್ರದೇಶ ಬಿಜೆಪಿ ನಾಯಕರು ಅವರನ್ನು ಸಂಪರ್ಕಿಸಿ ಸಮಾಧಾನಪಡಿಸಿದ್ದಾರೆ. ನಿಮ್ಮೊಂದಿಗೆ ಪಕ್ಷ ನಿಲ್ಲುತ್ತದೆ ಎಂದು ಭರವಸೆ ನೀಡಿರುವ ನಾಯಕರು ಫೇಸ್ಬುಕ್ ಪೋಸ್ಟ್ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇದು ವೈರಲ್ ಆಗಿದ್ದು ವಿಪಕ್ಷಗಳ ನಾಯಕರು ಶೇರ್ ಮಾಡುತ್ತಿದ್ದಾರೆ.