ನವದೆಹಲಿ: ತಮಿಳುನಾಡು ಉದ್ಯಮಿ ಮನೆ, ಕಚೇರಿಗಳ ಮೇಲೆ ರೇಡ್ ಮಾಡಲಾಗಿದ್ದು, ಬರೋಬ್ಬರಿ 220 ಕೋಟಿ ರೂಪಾಯಿ ಕಪ್ಪು ಹಣ ಪತ್ತೆಯಾಗಿದೆ.
ಚೆನ್ನೈ ಮೂಲದ ಟೈಲ್ಸ್ ಮತ್ತು ಸ್ಯಾನಿಟರಿವೇರ್ ಕಂಪನಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ಮಾಡಿದ ತೆರಿಗೆ ಅಧಿಕಾರಿಗಳು 220 ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣ ಪತ್ತೆ ಮಾಡಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ಟೈಲ್ಸ್ ತಯಾರಿಕಾ ಕಂಪನಿ ಇದಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಮಿಳುನಾಡು, ಗುಜರಾತ್, ಕೊಲ್ಕತ್ತಾ ಸೇರಿದಂತೆ ಕಚೇರಿಗಳ ಮೇಲೆ ಫೆಬ್ರವರಿ 26 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 8.30 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಅಕ್ರಮ ವ್ಯವಹಾರಕ್ಕಾಗಿ ಪ್ರತ್ಯೇಕ ರಹಸ್ಯ ಕಚೇರಿಯನ್ನು ತೆರೆದಿರುವುದು ಗೊತ್ತಾಗಿದೆ. ಇಲ್ಲಿ ದಾಖಲೆಗಳಿಲ್ಲದೆ ವಹಿವಾಟು ನಡೆಸಲಾಗುತ್ತಿತ್ತು. ಮಾಹಿತಿ ಪಡೆದು ಪರಿಶೀಲಿಸಿದಾಗ 220 ಕೋಟಿ ರೂಪಾಯಿ ಮೌಲ್ಯದ ಕಪ್ಪು ಹಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.