“ಐ ಮಿಸ್ ಯು ಲಾಟ್, ನೀವು ಬ್ಯೂಟಿಯಾಗಿದ್ದೀರಿ, ನಡತೆಯೂ ಅದ್ಭುತ,” ಎಂದು ಸ್ವಿಗ್ಗಿ ಡೆಲಿವರಿ ಏಜೆಂಟ್‌ನಿಂದ ವಾಟ್ಸಾಪ್‌ನಲ್ಲಿ ಸಂದೇಶ ಸ್ವೀಕರಿಸಿದ ದೆಹಲಿಯ ಮಹಿಳೆಯೊಬ್ಬರು ತಮ್ಮ ಅಳಲನ್ನು ಟ್ವಿಟರ್‌ನಲ್ಲಿ ಸಂದೇಶದ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡು ತೋಡಿಕೊಂಡಿದ್ದಾರೆ.
ಮನೆಬಾಗಿಲಿಗೆ ದಿನಸಿಗಳನ್ನು ಡೆಲಿವರಿ ಮಾಡಿದ ಏಜೆಂಟ್ ತನಗೆ ಹೀಗೆ ಮಾಡಿದ್ದನ್ನು ನೆನೆಪಿಸಿಕೊಂಡು ಮಾತನಾಡಿದ ಸಂತ್ರಸ್ತ ಮಹಿಳೆ, “ಈ ಅನುಭವ ಬಹಳಷ್ಟು ಮಹಿಳೆಯರಿಗೆ ಆಗಿದೆ ಎಂದು ನನಗೆ ಖಾತ್ರಿಯಿದೆ. ಬುಧವಾರ ರಾತ್ರಿ ನನಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ದಿನಸಿ ಡೆಲಿವರಿ ಬಂದಿದೆ. ಡೆಲಿವರಿ ಮಾಡಿದವ ನನಗೆ ಇಂದು ಈ ಸಂದೇಶಗಳನ್ನು ಕಳುಹಿಸಿದ್ದಾನೆ. ಹೀಗೆ ಆಗುತ್ತಿರುವುದು ಇದು ಮೊದಲೂ ಅಲ್ಲ ಕೊನೆಯೂ ಅಲ್ಲ,” ಎಂದು ಟ್ವೀಟ್‌ಗಳ ಸರಣಿಯಲ್ಲಿ ಹೇಳಿಕೊಂಡಿದ್ದಾರೆ.
“ಆದರೆ ಈ ನಂಬರ್ ಅನ್ನು ಬ್ಲಾಕ್ ಮಾಡುವುದಕ್ಕಿಂತ ಹೆಚ್ಚಿನದ್ದನ್ನು ಮಾಡಲು ಈ ಬಾರಿ ನಿರ್ಧರಿಸಿದೆ. ಹೀಗಾಗಿ ಆಪ್ ಮೂಲಕ ನಾನು ಸ್ವಿಗ್ಗಿ ಕೇರ್ಸ್ ಅನ್ನು ಸಂಪರ್ಕಿಸಿ ದೂರು ದಾಖಲಿಸಿದೆ. ಅಚ್ಚರಿಯ ವಿಚಾರವೇನೆಂದರೆ ನನಗೆ ಸಿಕ್ಕ ಪ್ರತಿಕ್ರಿಯೆಗಳೆಲ್ಲಾ ಮಾಮೂಲಿನಂತೆಯೇ ಇದ್ದು ನನಗೆ ಆದ ಕಿರುಕುಳಕ್ಕೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಂತೆ ಕಾಣಲಿಲ್ಲ.
ಇದಕ್ಕಿಂತ ಹೆಚ್ಚಿನದ್ದನ್ನು ಸ್ವಿಗ್ಗಿ ಮಾಡಲಿ ಎಂದು ಆಶಿಸುವೆ. ನಿಮ್ಮ ಆಪ್‌ನಲ್ಲಿ ಬರುವ ಕಿರುಕುಳದ ದೂರುಗಳನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಅವರಿಗೆ ನಾವು ಎಲ್ಲಿರುವುದು ಎಂದು ಗೊತ್ತಿರುತ್ತದೆ. ಇಂಥ ಘಟನೆಗಳು ಗಂಭೀರ ಪರಿಣಾಮ ಉಂಟು ಮಾಡುವ ಮುನ್ನ ಇಂಥ ದೂರುಗಳಿಗೆ ಸೂಕ್ತ ಬೆಂಬಲದ ವ್ಯವಸ್ಥೆ ಮಾಡಿ.
ಎಲ್ಲಾ ಏಜೆನ್ಸಿಗಳಿಂದ ಈ ರೀತಿಯ ನಿಷ್ಕ್ರಿಯತೆಗಳಿಂದಾಗಿ ತಡರಾತ್ರಿ ದಿನಸಿ/ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಬೇಕಾದರೆ ಭಯವಾಗುತ್ತದೆ,” ಎಂದು ಹೇಳಿಕೊಂಡಿದ್ದಾರೆ.
ಆದರೆ ಅದೇ ದಿನ ಸಂಜೆ ಸ್ವಿಗ್ಗಿಯ ಸಿಇಓ ಕಚೇರಿಯಿಂದ ತಮಗೆ ಕರೆ ಬಂದಿದ್ದಾಗಿ ತಿಳಿಸಿದ ಸಂತ್ರಸ್ತೆ, “ಸ್ವಿಗ್ಗಿಯ ಎಕ್ಸಲೇಶನ್ ತಂಡ ನನ್ನನ್ನು ಸಂಪರ್ಕಿಸಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು, ಮುಂದೆ ಈ ರೀತಿಯ ಘಟನೆಗಳಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ,” ಎಂದಿದ್ದಾರೆ.
ಪ್ರಕರಣ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.ಇಂಥದ್ದೇ ಮತ್ತೊಂದು ಸನ್ನಿವೇಶದಲ್ಲಿ ರ‍್ಯಾಪಿಡೋ ಟ್ಯಾಕ್ಸಿ ಚಾಲಕನಿಂದ ಮಹಿಳೆಯೊಬ್ಬರಿಗೆ ತಡರಾತ್ರಿ 1:25ರ ವೇಳೆ ವೈಯಕ್ತಿಕ ಸಂದೇಶವೊಂದು ಬಂದಿರುವುದು, ಮನೆಬಾಗಿಲಿನ ಸೇವೆಗಳ ಡೆಲಿವರಿ ವೇಳೆ ಮಹಿಳಾ ಸುರಕ್ಷತೆ ಸಂಬಂಧ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿವೆ.