ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಜೊತೆಗೆ ಬಡತನವೂ ಸೇರಿದರೆ ಅಂತಹ ಕುಟುಂಬಗಳ ಪಾಡು ನಿಜಕ್ಕೂ ಶೋಚನೀಯ. ಅಂತಹ ಒಂದು ಕುಟುಂಬದ ಕತೆ ಇಲ್ಲಿದೆ. ಇದನ್ನು ಓದಿದರೆ ನಿಜಕ್ಕೂ ಕಲ್ಲೆದೆಯವರನ್ನು ಕರಗಿಸುತ್ತದೆ. ಅಲ್ಲದೆ ಕಣ್ಣಂಚನ್ನು ತೇವಗೊಳಿಸುತ್ತದೆ.
ಘಟನೆಯ ವಿವರ: ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತ್ತಾದ ಬಂಸ್ಡ್ರೋನಿ ಪೊಲೀಸ್ ಠಾಣೆಗೆ ಇತ್ತೀಚೆಗೆ ಬಂದ ವ್ಯಕ್ತಿಯೊಬ್ಬ ನಾನು ನನ್ನ ಸಹೋದರನನ್ನು ಕೊಲೆ ಮಾಡಿದ್ದೇನೆ ನನ್ನನ್ನು ಬಂಧಿಸಿ ಎಂದು ಹೇಳಿದ್ದಾನೆ. ಒಂದು ಕ್ಷಣ ಶಾಕ್ ಗೊಳಗಾದ ಪೊಲೀಸರು ಬಳಿಕ ಆತನನ್ನು ಕರೆದುಕೊಂಡು ಕೊಲೆ ನಡೆದ ಸ್ಥಳಕ್ಕೆ ಹೋಗಿದ್ದಾರೆ.
ಮೃತದೇಹದ ಮುಖದ ಮೇಲೆ ದಿಂಬು ಹಾಕಿರುವುದು ಕಂಡುಬಂದಿದೆ. ಆದರೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ ಸಂದರ್ಭದಲ್ಲಿ 48 ವರ್ಷದ ದೇವಶಿಷ್ ಚಕ್ರವರ್ತಿ ಸ್ಟ್ರೋಕ್ ನಿಂದ ಮೃತಪಟ್ಟಿರುವುದು ತಿಳಿದುಬಂದಿದೆ. ಹೀಗಾಗಿ ಪೊಲೀಸರು ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ಆತನ ಕಿರಿಯ ಸಹೋದರ ಶುಭಾಷಿಸ್ ವಿಚಾರಣೆ ನಡೆಸಿದಾಗ ಮನಕಲಕುವ ಮಾಹಿತಿ ಹೊರಬಿದ್ದಿದೆ.
ಈ ಸಹೋದರರ ತಂದೆ ಮೊದಲೇ ತೀರಿಕೊಂಡಿದ್ದು, ತಾಯಿ ಮತ್ತು ಈ ಇಬ್ಬರು ಸಹೋದರರು ಉದ್ಯೋಗದಲ್ಲಿದ್ದಾಗ ಎಲ್ಲವೂ ಚೆನ್ನಾಗಿತ್ತು. ತಾಯಿ ಮತ್ತು ದೇಬಶಿಷ್, ಜಾದವ್ಪುರದ ಸೆರಮಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶುಭಾಷಿಸ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.
ನಿವೃತ್ತಿ ನಂತರ ತಾಯಿಗೆ ನಿವೃತ್ತಿ ವೇತನವಾಗಿ 35 ಸಾವಿರ ರೂಪಾಯಿ ಬರುತ್ತಿದ್ದು, ದೇವಶಿಷ್ ಸಹ ಒಳ್ಳೆಯ ಸಂಬಳ ತರುತ್ತಿದ್ದ ಕಾರಣ ಕುಟುಂಬ ಉತ್ತಮ ಜೀವನ ನಡೆಸುತ್ತಿತ್ತು. ಆದರೆ ಕೆಲವರ್ಷಗಳ ಹಿಂದೆ ಈ ಸಹೋದರರ ತಾಯಿ ಮೃತಪಟ್ಟಿದ್ದು ಪಿಂಚಣಿ ನಿಂತುಹೋಗಿದೆ. ಇದರ ಮಧ್ಯೆ ಆಘಾತವೆಂಬಂತೆ ಫ್ಯಾಕ್ಟರಿಯಲ್ಲಿ ನಡೆದ ಅಪಘಾತದಲ್ಲಿ ದೇವಶಿಷ್ ಒಂದು ಕಣ್ಣು ಕಳೆದುಕೊಂಡಿದ್ದಾರೆ.
ಹೀಗಾಗಿ ಅವರನ್ನು ಉದ್ಯೋಗದಿಂದ ನಿವೃತ್ತಿಗೊಳಿಸಿ ಮಾಸಿಕ 15 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತಿತ್ತು. ಈ ಎಲ್ಲಾ ಕಾರಣದಿಂದ ಸಣ್ಣಮನೆ ಹಿಂದಕ್ಕೆ ಸಹೋದರರು ಶಿಫ್ಟ್ ಆಗಿದ್ದು, ಹೇಗೋ ಜೀವನ ಸಾಗಿಸುತ್ತಿದ್ದರು. ಆದರೆ ದೇವಶಿಷ್ ಅನಾರೋಗ್ಯದಿಂದ ಬಳಲುತ್ತಿದ್ದು ತನಗೆ ಸಾವು ಯಾವ ಸಂದರ್ಭದಲ್ಲಾದರೂ ಬರಬಹುದು ಎಂದು ತಿಳಿದಿತ್ತು. ತಾನು ಸಾವನ್ನಪ್ಪಿದ ಬಳಿಕ ಬರುವ 15 ಸಾವಿರ ರೂಪಾಯಿ ಪಿಂಚಣಿಯೂ ನಿಂತುಹೋಗುತ್ತದೆ. ಆ ಬಳಿಕ ಕಿರಿಯ ಸಹೋದರನ ಬದುಕು ಕಷ್ಟವಾಗುತ್ತದೆ ಎಂಬ ಆತಂಕ ಕಾಡುತ್ತಿತ್ತು.
ಕೆಲಸ ಕಳೆದುಕೊಂಡಿದ್ದ ಕಿರಿಯ ಸಹೋದರ ಶುಭಾಷಿಸ್ ತನ್ನ ಸಾವಿನ ಬಳಿಕ ಅನಾಥನಾಗಬಾರದೆಂಬ ಕಾರಣಕ್ಕೆ ದೇವಶಿಷ್, ನಾನು ಸಾವನ್ನಪ್ಪಿದ ಬಳಿಕ ಕೊಲೆ ಮಾಡಿದ್ದೇನೆ ಎಂದು ಪೊಲೀಸ್ ಠಾಣೆಗೆ ತೆರಳಿ ತಿಳಿಸು. ಬಳಿಕ ನಿನಗೆ ಜೀವಾವಧಿ ಶಿಕ್ಷೆಯಾದರೆ ಅಲ್ಲಿಯವರೆಗೆ ಜೈಲಿನಲ್ಲಿ ಉಚಿತ ಊಟ-ವಸತಿ ಸಿಗುತ್ತದೆ ಎಂದು ಹೇಳಿದ್ದರೆನ್ನಲಾಗಿದೆ. ಹೀಗಾಗಿ ತನ್ನ ಅಣ್ಣನ ಸಾವಿನ ಬಳಿಕ ಶುಭಾಶಿಷ್ ಕೊಲೆ ಮಾಡಿದ್ದೇನೆ ಎಂದು ಪೊಲೀಸ್ ಠಾಣೆಗೆ ತೆರಳಿದ್ದ. ಈ ಹೃದಯವಿದ್ರಾವಕ ಘಟನೆ ಈಗ ಎಲ್ಲರ ಮನ ಕಲಕುತ್ತಿದೆ