ಬೆಂಗಳೂರು : ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಗೃಹ ಸಚಿವರು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಘಟನೆ ಕುರಿತು ತಮ್ಮ ಹೇಳಿಕೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ‘ನಾನು ಮಕ್ಕಳ ಆಟ ಅಂತ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸ್ನೇಹಿತರ ಮಧ್ಯೆ ಘಟನೆಗಳು ನಡೆಯುತ್ತದೆ, ನಂತರ ಅಲ್ಲಿಗೆ ಬಿಟ್ಟು ಹೋಗುತ್ತದೆ, ಸಣ್ಣ ಘಟನೆಗಳಿಗೆ ರಾಜಕೀಯ ಬಣ್ಣ ಬಳಿಯಬೇಡಿ ಎಂದು ಹೇಳಿದ್ದೆ, ನಾನು ಮಕ್ಕಳ ಆಟ ಅಂತ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಘಟನೆ ಕುರಿತು ಕ್ರಮ ಕೈಗೊಳ್ಳಲು ಕಾಲೇಜಿನ ಪ್ರಾಂಶುಪಾಲರು ಇದ್ದಾರೆ, ಅವರಿಗೆ ಬಿಡಬೇಕು. ಅಂತಹ ಘಟನೆ ನಡೆದಿದ್ದರೆ ಅವರು ನೋಡಿಕೊಳ್ಳುತ್ತಾರೆ. ಅವರು ಕಂಪ್ಲೆಂಟ್ ಕೊಡುತ್ತಾರೆ. ವಿದ್ಯಾರ್ಥಿನಿಯರ ತಂದೆ-ತಾಯಿಯನ್ನು ಕರೆಸಿ ಮಾತನಾಡುತ್ತಾರೆ, ಇದನ್ನು ದೊಡ್ಡ ಪ್ರಮಾಣಕ್ಕೆ ತೆಗೆದುಕೊಂಡು ಹೋಗಬೇಡಿ ಎಂದು ಹೇಳಿದ್ದೇನೆ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.