“ನಾನು ಪೊಲೀಸರಿಗೆ ಹೆದರುತ್ತೇನೆ” ಎಂದು ಬರೆದಿರುವ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಸೋಮವಾರ ವ್ಯಕ್ತಿಯೊಬ್ಬ ಶರಣಾಗಿದ್ದಾನೆ. ಸೌರಭ್ ಗಿರಿ ಎಂಬ ವ್ಯಕ್ತಿ ತನ್ನ ಕುತ್ತಿಗೆಗೆ ಬ್ಯಾನರ್‌ನೊಂದಿಗೆ ಮತ್ತು ಮಡಿಸಿದ ಕೈಗಳೊಂದಿಗೆ ಮೀರತ್‌ನ ಪರೀಕ್ಷಿತ್‌ಗಢ ಪೊಲೀಸ್ ಠಾಣೆಯನ್ನು ತಲುಪಿದ್ದಾನೆ.
“ನಾನು ಶರಣಾಗಲು ಬಂದಿದ್ದೇನೆ, ಕ್ಷಮಿಸಿ, ನಾನು ಭವಿಷ್ಯದಲ್ಲಿ ಯಾವುದೇ ತಪ್ಪುಗಳನ್ನು ಮಾಡುವುದಿಲ್ಲ, ನಾನು ಪೊಲೀಸರಿಗೆ ಹೆದರುತ್ತೇನೆ” ಎಂದು ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ಗಿರಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.
ಮೀರತ್ ಎಸ್ಪಿ ದೇಹತ್ ಅನಿರುದ್ಧ್ ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. “ಇಂದು, ಸೌರಭ್ ಗಿರಿ ಎಂಬ ವ್ಯಕ್ತಿ ಪರೀಕ್ಷಿತ್ ಘರ್ ಪೊಲೀಸ್ ಠಾಣೆಗೆ ಬಂದು ಹಾಜರಾಗಿದ್ದಾನೆ. ಕುತ್ತಿಗೆಗೆ ಫಲಕವನ್ನು ನೇತು ಹಾಕಿಕೊಂಡು ಶರಣಾಗಿದ್ದಾನೆ. ಇವನು ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿ. ಈತನ ವಿರುದ್ಧ ಇನ್ನೂ ನಾಲ್ಕು ಕೇಸುಗಳಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದರು ಎಂದಿದ್ದಾರೆ.