ಪ್ರಧಾನಿ ನರೇಂದ್ರ ಮೋದಿಯವರು 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡುವ ಸಲುವಾಗಿ ಗುರುವಾರದಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಬಾಲಕನೊಬ್ಬ ಭಾರಿ ಭದ್ರತೆಯ ನಡುವೆಯೂ ಮೋದಿ ಅವರ ಬಳಿ ಹೋಗಿ ಅವರಿಗೆ ಹಾರ ಹಾಕಲು ಯತ್ನಿಸಿದ್ದ. ಹೀಗಾಗಿ ಭಾರಿ ಭದ್ರತಾ ವೈಫಲ್ಯವಾಗಿದೆ ಎಂಬ ಕೂಗು ಕೇಳಿ ಬಂದಿತ್ತು.
ಇದರ ಮಧ್ಯೆ ನರೇಂದ್ರ ಮೋದಿಯವರಿಗೆ ಹಾರ ಹಾಕಲು ಯತ್ನಿಸಿದ್ದ ಆರನೇ ತರಗತಿ ವಿದ್ಯಾರ್ಥಿ ಕುನಾಲ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ನನಗೆ ಮೋದಿಯವರೆಂದರೆ ಬಹಳ ಇಷ್ಟ. ಅವರು ಮನುಷ್ಯರೇ ಅಲ್ಲ, ದೇವರು. ಹೀಗಾಗಿ ಅವರನ್ನು ಹತ್ತಿರದಿಂದ ನೋಡಲು ಹೋಗಿದ್ದೆ ಎಂದು ತಿಳಿಸಿದ್ದಾನೆ.
ಅವರ ಜೊತೆ ಮಾತನಾಡಬೇಕು ಎಂಬ ಆಸೆ ನನಗಿದೆ. ಅಲ್ಲದೆ ಅವರನ್ನು ಮನೆಗೆ ಬರುವಂತೆ ಕರೆಯುತ್ತೇನೆ ಎಂದು ತಿಳಿಸಿರುವ ಬಾಲಕ, ನನಗೆ ಮೋದಿಯವರ ಶೇಕ್ ಹ್ಯಾಂಡ್ ಮಾಡಬೇಕು ಎಂಬ ಆಸೆ ಇತ್ತು, ಆದರೆ ಪೊಲೀಸರು ಅವಕಾಶ ಕೊಡಲಿಲ್ಲ ಎಂದು ತನ್ನ ಬೇಸರ ವ್ಯಕ್ತಪಡಿಸಿದ್ದಾನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಅವರನ್ನು ಭೇಟಿ ಮಾಡುವುದಾಗಿ ತನ್ನ ಮನದಾಸೆ ಹೇಳಿಕೊಂಡಿದ್ದಾನೆ.