ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ತಮ್ಮ ಆಡಳಿತಾವಧಿಯಲ್ಲಿ ಯಾಕೆ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂಬ ಮಾತಿಗೆ ಖುದ್ದು ಉತ್ತರಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸುವುದರಿಂದ ದೂರ ಉಳಿದಿರುವ ಪ್ರಧಾನಿ ನರೇಂದ್ರ ಮೋದಿ ಇಂತಹ ನಿರ್ಧಾರ ಕೈಗೊಂಡಿದ್ದಕ್ಕೆ ವಿವರಣೆ ನೀಡಿದ್ದಾರೆ. ‘ಆಜ್ ತಕ್’ ವಾಹಿನಿಗೆ ನೀಡಿರುವ ವಿಶೇಷ ಸಂವಾದದಲ್ಲಿ ಮಾತನಾಡಿರುವ ಪ್ರಧಾನಮಂತ್ರಿ, ಈ ಹಿಂದೆ ಮಾಧ್ಯಮಗಳು ಇದ್ದಂತೆ ಈಗ ಇಲ್ಲ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ಅವರು ಏಕೆ ಪತ್ರಿಕಾಗೋಷ್ಠಿಗಳನ್ನು ನಡೆಸುವುದಿಲ್ಲ ಹಾಗು ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹೋಲಿಸಿದರೆ ಈಗ ಕಡಿಮೆ ಸಂದರ್ಶನಗಳನ್ನು ಏಕೆ ನೀಡುತ್ತಾರೆ ಎಂಬ ಪ್ರಶ್ನೆಗೆ “ನಾನು ಸಂಸತ್ತಿಗೆ ಜವಾಬ್ದಾರನಾಗಿದ್ದೇನೆ. ಇಂದು ಪತ್ರಕರ್ತರು ತಮ್ಮದೇ ಆದ ಆದ್ಯತೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಮಾಧ್ಯಮವು ಈಗ ಪಕ್ಷಾತೀತವಾಗಿಲ್ಲ” ಎಂದು ಉತ್ತರಿಸಿದ್ದಾರೆ.
ನಾನು ಸಂದರ್ಶನ ನೀಡಲು ಎಂದಿಗೂ ನಿರಾಕರಿಸಿಲ್ಲ ಎಂದ ಪ್ರಧಾನಿ ವಿಕಾಸಗೊಳ್ಳುತ್ತಿರುವ ಮಾಧ್ಯಮ ಮತ್ತು ಇಂದು ಬಹು ಸಂವಹನ ವಾಹಿನಿಗಳ ಉಪಸ್ಥಿತಿಯನ್ನು ಒತ್ತಿಹೇಳಿದರು. “ಮೊದಲು ಮಾಧ್ಯಮಗಳು ವಿಷಯಾಧಾರಿತವಾಗಿದ್ದವು. ವ್ಯಕ್ತಿ ಆಧಾರಿತವಾಗಿರಲಿಲ್ಲ ಮತ್ತು ಮಾಧ್ಯಮ ಮುಖ್ಯಸ್ಥರು ಯಾರು ಎಂಬುದೂ ಸಹ ತಿಳಿಯುತ್ತಿರಲಿಲ್ಲ. ಮಾಧ್ಯಮದಲ್ಲಿ ಯಾರು ಬರೆಯುತ್ತಿದ್ದಾರೆ, ಅವರ ಸಿದ್ಧಾಂತ ಏನು ಎಂಬುದರ ಬಗ್ಗೆ ಯಾರೂ ಕೂಡ ತಲೆ ಕೆಡಿಸಿಕೊಂಡಿಲ್ಲ. ಆದರೆ ಈಗ ಮತ್ತು ಇನ್ನು ಮುಂದೆ ಪರಿಸ್ಥಿತಿ ಹೀಗೆ ಇರುವುದಿಲ್ಲ” ಎಂದು ಪ್ರಧಾನಿ ಹೇಳಿದರು.
ನನ್ನ ನಂಬಿಕೆಯು ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಅಗತ್ಯವಿರುವವರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದ ಪ್ರಧಾನಿ, “ನಾನು ವಿಜ್ಞಾನ ಭವನದಲ್ಲಿ ರಿಬ್ಬನ್ ಕಟ್ ಮಾಡುತ್ತೇನೆ, ಫೋಟೋಗಳನ್ನೂ ತೆಗೆಸಿಕೊಳ್ಳುತ್ತೇನೆ…… ನಾನು ಜಾರ್ಖಂಡ್‌ನ ಸಣ್ಣ ಜಿಲ್ಲೆಗೆ ಹೋಗಿ ಅಲ್ಲೊಂದು ಸಣ್ಣ ಯೋಜನೆಗೂ ಕೆಲಸ ಮಾಡುತ್ತೇನೆ” ಎಂದು ಸಂವಾದದಲ್ಲಿ ಹೇಳಿದರು.
ವಾರಣಾಸಿಯ ಬಿಜೆಪಿ ಅಭ್ಯರ್ಥಿ ಆಗಿರುವ ಮೋದಿ, ಈ ಹಿಂದೆ ಒಂದೇ ಒಂದು ಸಂವಹನ ಮೂಲವಿದ್ದರೆ, ಇಂದು ಹೊಸ ಹೊಸ ಸಂವಹನ ಮಾಧ್ಯಮಗಳು ಬಂದಿದ್ದು ಎಲ್ಲವೂ ಬದಲಾಗಿದೆ. ಇಂದು ನೀವು ಸಾರ್ವಜನಿಕರೊಂದಿಗೆ ಮಾತನಾಡಲು ಬಯಸಿದರೆ, ಸಂವಹನಕ್ಕೆ ಹಲವು ದಾರಿಗಳಿವೆ ಎಂದು ಪ್ರಧಾನಿ ಹೇಳಿದರು.
ಇಂದು ಜನರು ಮಾಧ್ಯಮಗಳಿಲ್ಲದೆ ತಮ್ಮ ಧ್ವನಿಯನ್ನು ಎತ್ತಬಹುದು. ಉತ್ತರಿಸಬೇಕಾದ ವ್ಯಕ್ತಿ ಮಾಧ್ಯಮಗಳಿಲ್ಲದೇ ತನ್ನ ಅಭಿಪ್ರಾಯಗಳನ್ನು ಉತ್ತಮವಾಗಿ ವ್ಯಕ್ತಪಡಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು.