ಕೊರೊನಾ ವೈರಸ್ನಿಂದಾಗಿ ಅನೇಕರ ಜೀವನ ಅಲ್ಲೋಲಕಲ್ಲೋಲವಾಗಿದೆ. ಜೀವನ ನಿರ್ವಹಣೆಗೆ ಹಣವಿಲ್ಲದೇ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ದಿನಗೂಲಿ ಕಾರ್ಮಿಕರ ಬಾಳಂತೂ ಮೂರಾಬಟ್ಟೆಯಾಗಿದೆ. ಇದಕ್ಕೆ ಸಾಕಷ್ಟು ಉದಾಹರಣೆ ನೀಡಬಲ್ಲ ಘಟನೆಗಳು ಇಂಟರ್ನೆಟ್ನಲ್ಲಿ ಹರಿದಾಡ್ತಾ ಇದೆ.
ಹೈದರಾಬಾದ್ನ ದಿನಗೂಲಿ ಕಾರ್ಮಿಕನ ಪುತ್ರಿಯಾದ ಮಾಮಿಡಿಪೆಲ್ಲಿ ರಚನಾ, ಹೋಟೆಲ್ ಮ್ಯಾನೇಜ್ಮೆಂಟ್ ಅಭ್ಯಾಸ ಮಾಡುತ್ತಿದ್ದರು. ತನ್ನ ಓದಿನ ಖರ್ಚಿಗಾಗಿ ಈಕೆ ತಾನೇ ಸ್ವತಃ ದುಡಿಯುತ್ತಿದ್ದಾಳೆ.
ಈ ವಿಚಾರವಾಗಿ ಮಾತನಾಡಿದ ರಚನಾ, ನಾನು ಸರ್ಕಾರಿ ಶಾಲೆಯಲ್ಲಿ 12ನೇ ತರಗತಿಯವರೆಗೂ ಉಚಿತವಾಗಿ ಅಭ್ಯಾಸ ಮಾಡಿದೆ. ನನ್ನ ಶಿಕ್ಷಕರ ಮಾರ್ಗದರ್ಶನದಂತೆಯೇ ಮುಂದಿನ ಅಭ್ಯಾಸವನ್ನ ಮಾಡುತ್ತಿದ್ದೇನೆ. ಹೈದರಾಬಾದ್ನಲ್ಲಿ ನಾನು ಹೋಟೆಲ್ ಮ್ಯಾನೇಜ್ಮೆಂಟ್ ಡಿಪ್ಲೋಮಾ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಶಿಕ್ಷಣದ ಖರ್ಚನ್ನ ಭರಿಸುವ ಸಲುವಾಗಿ ದಿನ ಬೆಳಗ್ಗೆ ಈಕೆ ಮನೆ ಮನೆಗೆ ತೆರಳಿ ಹಾಲನ್ನ ಮಾರಾಟ ಮಾಡುತ್ತಾಳೆ. ಇದೀಗ ಜೊಮ್ಯಾಟೋ ಕಂಪನಿಗೆ ಸೇರಿರುವ ಈಕೆ ಇಲ್ಲೂ ಕೂಡ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾಳೆ. ಪ್ರತಿ ತಿಂಗಳು 9000 ರೂಪಾಯಿ ಸಂಪಾದಿಸುವ ಈಕೆ ಇದರಲ್ಲಿ 3000 ರೂಪಾಯಿಯಲ್ಲಿ ಬಾಡಿಗೆ ರೂಮಿನ ಹಣ ಪಾವತಿಸಿ ಉಳಿದ ಹಣವನ್ನ ಕುಟುಂಬ ನಿರ್ವಹಣೆಗೆಂದು ಮನೆಗೆ ಕಳುಹಿಸುತ್ತಾಳೆ.