ಹೈದರಾಬಾದ್: ಟ್ಯಾಕ್ಸಿ ಚಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಹೈದರಾಬಾದ್ ನ ರಾಯದುರ್ಗಂ ಪ್ರದೇಶದಲ್ಲಿ ಶನಿವಾರ ಐವರನ್ನು ಬಂಧಿಸಲಾಗಿದೆ.
ಮೃತನ ಪತ್ನಿ ಒಳಗೊಂಡ ಗ್ಯಾಂಗ್ ನಾಗಾರ್ಜುನ ಸಾಗರದಲ್ಲಿ ಮುಳುಗಿಸಿ ಸಾಯಿಸುವ ಮೊದಲು ಆತನಿಗೆ ಮಾದಕ ದ್ರವ್ಯ ಕೊಟ್ಟಿದ್ದರು ಎಂದು ವರದಿಯಾಗಿದೆ.
ಕ್ಯಾಬ್ ಚಾಲಕ ಧನವತ್ ರಾಗ್ಯಾ ನಾಯ್ಕ್(28) ಆಗಸ್ಟ್ 24 ರಿಂದ ನಾಪತ್ತೆಯಾಗಿದ್ದು, ಅದೇ ದಿನ ಅವರನ್ನು ಕೊಲೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ನಾಯಕ್ ಅವರ ಪತ್ನಿ ರೋಜಾ ತನ್ನ ಸೋದರ ಮಾವ ಸಭಾವತ್ ಲಕಪತಿಯೊಂದಿಗೆ ಸಂಬಂಧ ಹೊಂದಿದ್ದರು. ಅವರು ನಾಯಕ್ ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಸಹಾಯಕ್ಕಾಗಿ ಶಿವ ಎಂದು ಗುರುತಿಸಲಾದ ಮೂರನೇ ಆರೋಪಿಯನ್ನು ಕರೆಸಿಕೊಂಡಿದ್ದರು.
ಲಕಪತಿ ನಲ್ಗೊಂಡದಲ್ಲಿ ಹಣ ಕೊಡುವುದಾಗಿ ನಾಯ್ಕ್ ನನ್ನು ಕರೆಸಿಕೊಂಡಿದ್ದು, ಅವರು ಆಗಸ್ಟ್ 24 ರಂದು ಕಾರ್ ನಲ್ಲಿ ಹೊರಟಿದ್ದರು. ಪ್ರಯಾಣದ ಸಮಯದಲ್ಲಿ, ಶಿವ ನಿದ್ರಾಜನಕ ಬೆರೆಸಿದ ಬಾದಾಮ್ ಹಾಲನ್ನು ನಾಯಕ್ ಗೆ ನೀಡಿದ್ದಾನೆ, ಎಂದು ಪೋಲೀಸರು ಉಲ್ಲೇಖಿಸಿದ್ದಾರೆ.
ನಂತರ ಲಕಪತಿ ಮತ್ತು ಶಿವ ಸೇರಿಕೊಂಡು ನಾಯಕ್ ನನ್ನು ನಾಗಾರ್ಜುನಸಾಗರದ ಕೃಷ್ಣಾ ಹಿನ್ನೀರಿಗೆ ಕರೆದೊಯ್ದರು. ಪ್ರಕರಣದ ನಾಲ್ಕನೇ ಆರೋಪಿ ಮಾನ್ ಸಿಂಗ್ ದೋಣಿಯೊಂದಿಗೆ ಅವರಿಗಾಗಿ ಕಾಯುತ್ತಿದ್ದ. ಪ್ರಜ್ಞೆ ತಪ್ಪಿದ ನಾಯಕನನ್ನು ನದಿಯ ಮಧ್ಯಕ್ಕೆ ಸಾಗಿಸಲು ಸಹಾಯ ಮಾಡಿದ. ನದಿಯ ಉದ್ದಕ್ಕೂ ಸುಮಾರು 10 ಕಿಮೀ ಸಾಗಿ ನಂತರ ಆರೋಪಿಗಳು ನಾಯ್ಕ್ ಅವರನ್ನು ಮೀನುಗಾರಿಕೆ ಬಲೆಯಲ್ಲಿ ಸುತ್ತಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಮೃತದೇಹವನ್ನು ಕಲ್ಲಿಗೆ ಕಟ್ಟಿ ಜಲರಾಶಿಯಲ್ಲಿ ಎಸೆದರು.
ಏತನ್ಮಧ್ಯೆ, ರೋಜಾ ಅದೇ ದಿನ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಆದಾಗ್ಯೂ, ರಾಯದುರ್ಗಂ ಪೊಲೀಸರು ಅಂತಿಮವಾಗಿ ಪ್ರಕರಣವನ್ನು ಭೇದಿಸಿದ್ದರು. ಅಪರಾಧ ನಡೆದ ಸುಮಾರು ಮೂರು ವಾರಗಳ ನಂತರ 5 ನೇ ಆರೋಪಿ ಬಾಲಾಜಿ ಸೇರಿ 5 ಆರೋಪಿಗಳನ್ನು ಬಂಧಿಸಿದ್ದಾರೆ.