ಹೈದರಾಬಾದ್ ನಗರದ ಬಾಚುಪಲ್ಲಿಯ ರೇಣುಕಾ ಎಲ್ಲಮ್ಮ ಕಾಲೋನಿಯಲ್ಲಿ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಬಾಚುಪಲ್ಲಿಯ ರೇಣುಕಾ ಎಲ್ಲಮ್ಮ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ತಡೆಗೋಡೆ ಕುಸಿದಿದೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಘಟನೆ ನಡೆದ ಪ್ರದೇಶದಲ್ಲಿ ನಿನ್ನೆ(ಮಂಗಳವಾರ) ಸಂಜೆಯಿಂದ ಇಂದು ಬೆಳಗಿನ ಜಾವದವರೆಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಕುಸಿದ ಗೋಡೆಯ ಅವಶೇಷಗಳಡಿಯಿಂದ ಒಟ್ಟು ಏಳು ಮೃತ ದೇಹಗಳು ಪತ್ತೆಯಾಗಿವೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತರೆಲ್ಲರೂ ಛತ್ತೀಸ್‌ಗಢ ಮತ್ತು ಒಡಿಶಾ ರಾಜ್ಯಗಳಿಗೆ ಸೇರಿದವರು.
ಮೃತರನ್ನು ತಿರುಪತಿ(20), ಶಂಕರ್(22), ರಾಜು(25), ಖುಷಿ(23), ರಾಮ್ ಯಾದವ್(34), ಗೀತಾ(32) ಮತ್ತು ಹಿಮಾಂಶು(4) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.