ಹೈದರಾಬಾದ್: ತೆಲಂಗಾಣದ ಹೈದರಾಬಾದ್ನ ಎಸ್ಆರ್ ನಗರದಲ್ಲಿ ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ವಿವಾತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆಕೆಯ ಅಕ್ರಮ ಸಂಬಂಧದ ಬಗ್ಗೆ ಅವರ ಕುಟುಂಬಕ್ಕೆ ತಿಳಿಸುವುದಾಗಿ ಬೆದರಿಕೆ ಹಾಕಿ ಇಂತಹ ಕೃತ್ಯವೆಸಗಿದ್ದಾರೆ.
ಒಂದು ದಿನದ ನಂತರ ಮಹಿಳೆ ಮತ್ತು ಆಕೆಯ ಪ್ರೇಮಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಮಹಿಳೆ ನೀಡಿದ ದೂರಿನ ನಂತರ ಶುಕ್ರವಾರ ಇಡೀ ವಿಷಯ ಬಯಲಿಗೆ ಬಂದಿದೆ. ವರದಿಗಳ ಪ್ರಕಾರ, ಆಕೆಯ ನೆರೆಹೊರೆಯವರಾದ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿವಾಹಿತೆ ಕಟ್ಟಡ ಕಾರ್ಮಿಕಳಾಗಿದ್ದು, ಆಕೆ ತನ್ನ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಡಿಸೆಂಬರ್ 13 ರಂದು ತನ್ನ ಪ್ರೇಮಿಯನ್ನು ಭೇಟಿಯಾಗಲು ಮನೆಯಿಂದ ಹೊರಟಿದ್ದಳು. ಇಬ್ಬರು ವ್ಯಕ್ತಿಗಳು ಆಕೆಯನ್ನು ಅಡ್ಡಗಟ್ಟಿ ಆಕೆಯ ಅಕ್ರಮ ಸಂಬಂಧವನ್ನು ಕುಟುಂಬ ಸದಸ್ಯರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅವರು ಅವಳನ್ನು ಖಾಲಿ ಕೋಣೆಗೆ ಕರೆದೊಯ್ದು ಅಲ್ಲಿ ಅವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 14 ರಂದು, ಮಹಿಳೆ ಮತ್ತು ಆಕೆಯ ಪ್ರೇಮಿ ವಿಕಾರಾಬಾದ್ ಜಿಲ್ಲೆಯ ಪ್ರತ್ಯೇಕ ಸ್ಥಳಕ್ಕೆ ಹೋಗಿ ಇಬ್ಬರು ಕೀಟನಾಶಕ ಸೇವಿಸಿದ್ದಾರೆ. ಪ್ರಜ್ಞಾಹೀನರಾಗುವ ಮುನ್ನ ಆಕೆಯ ಪ್ರಿಯಕರ, ಕುಟುಂಬದ ಸದಸ್ಯರಿಗೆ ಫೋನ್ ಮಾಡಿ ಪರಿಸ್ಥಿತಿಯನ್ನು ತಿಳಿಸಿದ್ದಾನೆ. ತರುವಾಯ, ಇಬ್ಬರನ್ನೂ ಪತ್ತೆಹಚ್ಚಲಾಯಿತು. ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು.
ಶುಕ್ರವಾರ, ಪ್ರಜ್ಞೆ ಮರಳಿದ ನಂತರ ಮಹಿಳೆ ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಪೊಲೀಸರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.