ಯಾವುದಾದರೂ ಒಂದು ರಾಜ್ಯಕ್ಕೆ ಪ್ರಧಾನಿಯವರು ಭೇಟಿ ನೀಡುತ್ತಾರೆಂದರೆ ಶಿಷ್ಟಾಚಾರದ ಪ್ರಕಾರ ಅವರನ್ನು ಆಯಾ ರಾಜ್ಯದ ಮುಖ್ಯಮಂತ್ರಿಗಳು ಸ್ವಾಗತಿಸುವುದು ಸಂಪ್ರದಾಯ. ಒಂದೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಲಭ್ಯವಿರದಿದ್ದರೆ ಅವರ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿ ಪ್ರಧಾನಿಯವರನ್ನು ಸ್ವಾಗತಿಸುತ್ತಾರೆ.
ಆದರೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮಾತ್ರ ಈ ಒಂದು ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಂತೆ ಕಾಣುತ್ತದೆ. ಅದರಲ್ಲೂ ನರೇಂದ್ರ ಮೋದಿಯವರನ್ನು ಸ್ವಾಗತಿಸಬೇಕೆಂದರೆ ಕೆ. ಚಂದ್ರಶೇಖರ್ ರಾವ್ ಅಂತಹ ಸಂದರ್ಭವನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸಿಕೊಳ್ಳುತ್ತಾರೆ.
ಇತ್ತೀಚೆಗಷ್ಟೇ ನರೇಂದ್ರ ಮೋದಿಯವರು ಹೈದರಾಬಾದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸದೆ ಬೆಂಗಳೂರಿಗೆ ಬಂದು ಜೆಡಿಎಸ್ ನಾಯಕರನ್ನು ಭೇಟಿಯಾಗಿದ್ದ ಕೆ. ಚಂದ್ರಶೇಖರ ರಾವ್ ಇದೀಗ ನರೇಂದ್ರ ಮೋದಿಯವರೊಂದಿಗಿನ ಮತ್ತೊಂದು ಮುಖಾಮುಖಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.
ಹೈದರಾಬಾದಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ಇದರಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ. ಸರ್ಕಾರದ ಮೂಲಗಳ ಪ್ರಕಾರ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಬದಲು ಪಶು ಸಂಗೋಪನೆಯ ಸಚಿವ ತಲಸಾನಿ ಶ್ರೀನಿವಾಸ್ ಯಾದವ್, ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ ಎಂದು ತಿಳಿದುಬಂದಿದೆ.