ಹೈದರಾಬಾದ್: ಮರ್ಯಾದಾಗೇಡು ಹತ್ಯೆಯ ಶಂಕಿತ ಪ್ರಕರಣದಲ್ಲಿ, ಕಳೆದ ವಾರ ನಗರದ ಕೆಪಿಎಚ್‌ಬಿ ಕಾಲೋನಿಯಿಂದ ನಾಪತ್ತೆಯಾಗಿದ್ದ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ನಾರಾಯಣ ರೆಡ್ಡಿ ಅವರ ಸುಟ್ಟ ಶವ ಸಂಗಾರೆಡ್ಡಿ ಜಿಲ್ಲೆಯ ಜಿನ್ನಾರಾಮ್‌ನ ಅರಣ್ಯ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ. ಅವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ ಪತ್ನಿಯ ಸಂಬಂಧಿಕರು ಕೊಲೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 27 ರಂದು ರೆಡ್ಡಿ ನಾಪತ್ತೆಯಾಗಿದ್ದು, ಜೂನ್ 30 ರಂದು ಅವರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದರು. ನಾರಾಯಣ್ ಅವರು ಕೆಲವು ಸಂಬಂಧಿಕರನ್ನು ಭೇಟಿಯಾಗಲು ಹೋಗುವುದಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದರು. ಆದರೆ, ಅವರು ಹಿಂತಿರುಗಲಿಲ್ಲ. ಮೊಬೈಲ್ ಸಹ ಸ್ವಿಚ್ ಆಫ್ ಆಗಿದ್ದರಿಂದ ಹತ್ಯೆಗೀಡಾದ ನಾರಾಯಣ ರೆಡ್ಡಿಯ ಸೋದರ ಮಾವ ಕೆಪಿಎಚ್‌ಬಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು.
ರೆಡ್ಡಿ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರು ದೂರದ ಸಂಬಂಧಿಗಳಾಗಿದ್ದರೂ ಮತ್ತು ಒಂದೇ ಜಾತಿಯವರಾಗಿದ್ದರೂ ಕೂಡ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಪೊಲೀಸರು ಮೂವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಜೂನ್ 27 ರಂದು ರೆಡ್ಡಿ ಸಂಬಂಧಿಕರು ಅವರನ್ನು ಅವರ ಫ್ಲಾಟ್‌ನಿಂದ ಕರೆದೊಯ್ದು ಮಣಿಕೊಂಡ ಬಳಿಯ ಮತ್ತೊಂದು ಫ್ಲಾಟ್‌ಗೆ ಕರೆದೊಯ್ದು ಅಲ್ಲಿ ಅವರು ಮದ್ಯ ಸೇವಿಸುವಂತೆ ಮಾಡಿದ್ದಾರೆ. ಆತನಿಗೆ ಅಮಲೇರಿದ ನಂತರ ಕುತ್ತಿಗೆಯನ್ನು ಬಿಗಿದು ಕೊಂದಿದ್ದಾರೆ. ನಂತರ ಅವರ ದೇಹಕ್ಕೆ ಬೆಂಕಿ ಹಚ್ಚಿದ್ದಾರೆ. ಇನ್ನೂ ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.